ಬೆಂಗಳೂರು: ಒಂದರಿಂದ 9 ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ಡೌನ್ ಮಾಡುವುದಿಲ್ಲ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಕೂಡ ಜಾರಿ ಮಾಡುವುದಿಲ್ಲ. ಇಂದಿನಿಂದ 15 ದಿನ ಸತ್ಯಾಗ್ರಹ, ಚಳವಳಿ, ರ್ಯಾಲಿ ನಡೆಸುವಂತಿಲ್ಲ. ರಾಜಕೀಯ ಪಕ್ಷಗಳ ರ್ಯಾಲಿಗಳಿಗೆ ಕೂಡ ನಿಯಮ ಅನ್ವಯವಾಗಲಿದೆ.
ಸದ್ಯಕ್ಕೆ ಶಾಲೆ ಬಂದ್ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಯಾವುದೇ ಪರೀಕ್ಷೆಗಳನ್ನು ರದ್ದು ಮಾಡುವುದಿಲ್ಲ. ಉಳಿದ ತರಗತಿ ಪರೀಕ್ಷೆಗಳು ಶಾಲೆಗಳಿಗೆ ಬಿಟ್ಟ ವಿಚಾರವಾಗಿದೆ. ಚಿತ್ರಮಂದಿರಗಳಿಗೆ ಸದ್ಯಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ.
ಕೊರೋನಾ ನಿಯಮಗಳನ್ನು ಉಲ್ಲಂಘಿಸಿದರೆ ಮದುವೆ ಛತ್ರಗಳನ್ನು ಬಂದ್ ಮಾಡಲಾಗುವುದು. ನಿಯಮ ಉಲ್ಲಂಘಿಸಿದ ಮಂಟಪಗಳನ್ನು ಆರು ತಿಂಗಳ ಕಾಲ ಬಂದ್ ಮಾಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸಿನಿಮಾ ಹಾಲ್ ಗಳಿಗೆ ನೀಡಲಾದ ವಿನಾಯಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಿನಿಮಾ ಹಾಲ್ ಗಳಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಶಾಲೆ, ಕಾಲೇಜು ಬಂದ್ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆ ಇಲ್ಲದೆ ಎಲ್ಲ ಮಕ್ಕಳನ್ನು ಪಾಸ್ ಮಾಡುವ ಬಗ್ಗೆ ನಿರ್ಧರಿಸಿಲ್ಲ. ಪರೀಕ್ಷೆ ನಡೆಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಎಂದಿನಂತೆ ಶಾಲೆ-ಕಾಲೇಜುಗಳು ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.