ಬೆಂಗಳೂರು: ಶಾಲಾ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಬೆನ್ನಲ್ಲೇ ಎಚ್ಚೆತ್ತ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆಗೆ ಮಹತ್ವದ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಹೊಸ ಸುತ್ತೋಲೆ ಹೊರಡಿಸಿದೆ.
ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರು ಮಕ್ಕಳ ಸುರಕ್ಷತೆಯ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಶಾಲಾ ವಾಹನಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು, ಸಹಾಯಕರಿಂದ ಮಕ್ಕಳ ಮೇಲೆ ದೌರ್ಜನ್ಯವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ. ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ ಕಾವೇರಿ ಹೊಸ ನಿಯಮ ಜಾರಿ ಮಾಡಿದ್ದಾರೆ.
ಶಾಲಾ ವಹನಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು ಹಾಗೂ ಸಹಾಯಕರು ಪೊಲೀಸ್ ಠಾಣೆಗಳಿಂದ ನಡವಳಿಕೆ ಪ್ರಮಾಣಪತ್ರ ಕಡ್ಡಾಯವಾಗಿ ಪಡೆಯಬೇಕು.
ಕರ್ನಾಟಕ ಮೋಟಾರು ವಾಹನ ನಿಯಮ 1999ಕ್ಕೆ ತಿದ್ದುಪಡಿ ತಂದು ಖಾಸಗಿ ಒಪ್ಪಂದ ವಾಹನಗಳಲ್ಲಿ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಅಧಿಸೂಚನೆ ಹಾಗೂ ಸ್ಕೂಲ್ ಕ್ಯಾಬ್ ಸೇಫ್ಟಿ ಕಮಿಟಿ ರಚಿಸಬೇಕು.
ನಡವಳಿಕೆ ಪತ್ರವನ್ನು ಆಯಾ ಶಾಲೆಯ SATAನಲ್ಲಿ ಅಪ್ಡೇಟ್ ಮಾಡಬೇಕು. ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ತರುವ ಕಾರ್ಯಕ್ಕೆ ಮಹಿಳಾ ಸಹಾಯಕರ ನೇಮಕ ಮಾಡಬೇಕು.
ಶಾಲಾ ವಾಹನಗಳಲ್ಲಿ ಸಿಸಿಟಿವಿ ಕಡ್ಡಾಯ ಹಾಗೂ ಮಕ್ಕಳನ್ನು ಮನೆಗೆ ಬಿಟ್ಟ ಬಳಿಕ ಶಾಲಾ ವಾಹನ ಚಾಲಕರು ಶಾಲೆಗೆ ಬಂದು ಹಾಜರಾತಿ ಪುಸ್ತಕದಲ್ಲಿ ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ಕಡ್ಡಾಯವಾಗಿ ಸಹಿ ಹಾಕಬೇಕು.
ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.