ಬೆಂಗಳೂರು: ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಶಾಲೆಗಳಲ್ಲಿ ಮೊಬೈಲ್ ಜಾಗೃತಿ ಅಭಿಯಾನ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಮಕ್ಕಳು ಮತ್ತು ಪೋಷಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮೊಬೈಲ್ ಬಳಸುವುದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ, ಮಾನಸಿಕ ಆರೋಗ್ಯ ಸಮಸ್ಯೆ ಸೇರಿದಂತೆ ನಾನಾ ರೀತಿಯ ಆರೋಗ್ಯ ತೊಂದರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಭಿಯಾನ ಕೈಗೊಳ್ಳಲಾಗುವುದು.
ಕೊರೊನಾ ಸಂದರ್ಭದಲ್ಲಿ ಆನ್ ಲೈನ್ ಕ್ಲಾಸ್ ಗೆ ಮಕ್ಕಳು ಮೊಬೈಲ್ ಬಳಸುವುದು ಅನಿವಾರ್ಯವಾಗಿತ್ತು. ನಂತರ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಇದರ ಪರಿಣಾಮ ಕಣ್ಣಿನ ಸಮಸ್ಯೆ, ಮಾನಸಿಕ ಸಮಸ್ಯೆ, ಪೋಕ್ಸೋ ಪ್ರಕರಣ ಹೆಚ್ಚಳ, ಜಾಲತಾಣಗಳ ಮೂಲಕ ಮಕ್ಕಳ ದುರ್ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಪೋಷಕರೇ ಮಕ್ಕಳ ಕೈಗೆ ಮೊಬೈಲ್ ಕೊಡುತ್ತಿದ್ದಾರೆ. ಇದರಿಂದಾಗಿ ಮಕ್ಕಳು ಆಟದ ಬದಲು ಮೊಬೈಲ್ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನು ತಡೆಯಲು ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗುವುದು.
ಮೊಬೈಲ್ ಅಪಾಯದಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಮಕ್ಕಳು, ಪೋಷಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶಾಲೆ ಆಡಳಿತ ಮಂಡಳಿ, ಆರೋಗ್ಯ ಇಲಾಖೆ ಸಹಕಾರದೊಂದಿಗೆ ಮಕ್ಕಳಿಗೆ ವೈಜ್ಞಾನಿಕವಾಗಿ ಮೊಬೈಲ್ ಬಳಕೆ ತಿಳಿವಳಿಕೆ ನೀಡಲಾಗುತ್ತದೆ. ಎಲ್ಲಾ ಶಾಲೆಗಳಲ್ಲೂ ಅಕ್ಟೋಬರ್ ಅಂತ್ಯದೊಳಗೆ ಮೊಬೈಲ್ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ ಕೈಗೊಂಡು ನ. 5 ರೊಳಗೆ ವರದಿ ಸಲ್ಲಿಸಲು ತಿಳಿಸಲಾಗಿದೆ.