
ದಾವಣಗೆರೆ: ವಸತಿ ಶಾಲೆಯಲ್ಲಿ ಊಟ ಮಾಡಿದ ಬಳಿಕ 25 ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಕ್ಕಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ ಊಟ ಮಾಡುತ್ತಿದ್ದಂತೆ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು, ಅವರಿಗೆ ಸಂತೆಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಗಂಭೀರವಾಗಿ ಅಸ್ವಸ್ಥರಾದ ಐವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಸ್ವಚ್ಛತೆ ಕಾಪಾಡದೆ ಮಕ್ಕಳಿಗೆ ಆಹಾರ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ವಸತಿ ಶಾಲೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.