ಬೆಂಗಳೂರು: ಡಿಸೆಂಬರ್ 12 ರಿಂದ ರಾಜ್ಯದ 13 ಆಕಾಶವಾಣಿ ಕೇಂದ್ರಗಳು ಮತ್ತು ಮೂರು ವಿವಿಧ ಭಾರತೀಯ ಎಫ್ಎಂ ಕೇಂದ್ರಗಳಲ್ಲಿ ಮಕ್ಕಳಿಗೆ ಬಾನದನಿ ರೇಡಿಯೊ ಪಾಠ ಪ್ರಸಾರ ಮಾಡಲಾಗುವುದು.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ರೂಪಿಸಿದ ಆಕಾಶವಾಣಿ ಮೂಲಕ ಪ್ರಸಾರವಾಗುವ ಬಾನದನೊ ರೇಡಿಯೊ ಪಾಠವನ್ನು ಎಲ್ಲಾ ಶಾಲೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಸೂಚನೆ ನೀಡಲಾಗಿದೆ.
ಸೋಮವಾರದಿಂದ ಗುರುವಾರದವರೆಗೆ ಮಧ್ಯಾಹ್ನ 2:35 ರಿಂದ 3 ಗಂಟೆಯವರೆಗೆ ಬಾನದನಿ ರೇಡಿಯೊ ಪಾಠ ಪ್ರಸಾರವಾಗಲಿದೆ. ಒಂದರಿಂದ ಒಂಬತ್ತನೇ ತರಗತಿಯ ಮಕ್ಕಳಿಗೆ ಕಾರ್ಯಕ್ರಮ ಉಪಯೋಗವಾಗಲಿದೆ. ನೀತಿ ಕಥೆ, ಯೋಗ ಮತ್ತು ಆರೋಗ್ಯ ಶಿಕ್ಷಣ, ವೃತ್ತಿ ಶಿಕ್ಷಣ. ಶೈಕ್ಷಣಿಕ ಮಾರ್ಗದರ್ಶನ. ಇಂಗ್ಲಿಷ್ ಕಲಿಕೆ, 4 ಮತ್ತು 5ನೇ ತರಗತಿ ಮಕ್ಕಳಿಗೆ ಕನ್ನಡ, ಗಣಿತ ವಿಷಯಗಳ ಕಲಿಕೆಯ ಫಲ ಆಧಾರಿತ ಪಾಠಗಳನ್ನು ಪ್ರಸಾರ ಮಾಡಲಾಗುವುದು.
ರೇಡಿಯೊ ಮಾತ್ರವಲ್ಲದೆ, ಮೊಬೈಲ್, ಯೂಟ್ಯೂಬ್ ಚಾನೆಲ್, ಪ್ರಸಾರ ಭಾರತಿ ನ್ಯೂಸ್ ಆನ್ ಏರ್ ನಲ್ಲಿ ಕೇಳಬಹುದು. ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಟುವಟಿಕೆಗಳ ಸಮರ್ಪಕ ನಿರ್ವಹಣೆಯೊಂದಿಗೆ ಪಾಠಗಳನ್ನು ವಿದ್ಯಾರ್ಥಿಗಳಿಗೆ ಕೇಳಿಸಬೇಕು. ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತಾಗಲು ಶಾಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲಾ ಉಪ ನಿರ್ದೇಶಕರು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮಾಹಿತಿಯನ್ನು desert.jar.nic.in ನಲ್ಲಿ ಪ್ರಕಟಿಸಲಾಗಿದೆ.