ಬೆಂಗಳೂರು: 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿರುವ ಅಜೀಂ ಪ್ರೇಮ್‌ಜಿ ಫೌಂಡೇಶನ್ ಫಾರ್ ಡೆವೆಲಪ್‌ಮೆಂಟ್ (APF) ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಸೇರಿದಂತೆ ಸರ್ಕಾರಿ, ಅನುದಾನಿತ ಶಾಲೆಗಳ 1-10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎಲ್ಲಾ ಆರು ದಿನಗಳಿಗೆ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ,/ಬಾಳಹಣ್ಣು/ ಶೇಂಗಾ ಚಿಕ್ಕಿಯನ್ನು ವಿತರಿಸುತ್ತಿದ್ದು, ಅಧಿಕೃತವಾಗಿ ಚಾಲನೆ ನೀಡುವ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಹಂತದಲ್ಲಿ ಸೆ. 25 ರಂದು ನಡೆಸಲಾಗುವುದು.
ರಾಜ್ಯ ಸರ್ಕಾರವು ಹಿಂದಿನ ವರ್ಷಗಳಂತೆ ಈ ವರ್ಷವೂ ಸಹ ತನ್ನ ವಾರ್ಷಿಕ ಶೇಕಡಾ 100 ರ ಆರ್ಥಿಕ ಅನುದಾನದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅವರಲ್ಲಿರುವ ಅಪೌಷ್ಠಿಕತೆ ನಿವಾರಿಸಲು, ರಕ್ತ ಹೀನತೆ ತಡೆಗಟ್ಟಲು, ಬಹು ಪೋಷಕಾಂಶಗಳ ನ್ಯೂನತೆಯನ್ನು ಹೋಗಲಾಡಿಸಲು, ಅವರ ಆರೋಗ್ಯಕರ ದೈಹಿಕ ಮಾನಸಿಕ ಬೆಳವಣಿಗೆಯನ್ನು ನಿರಂತರ ಕಲಿಕೆಯನ್ನು ಪ್ರೋತ್ಸಾಹಿಸಲು ಮತ್ತು ಅವರ ಶಾಲಾ ತರಗತಿ ದಾಖಲಾತಿಯನ್ನು ಹೆಚ್ಚಳವಾಗಿಸಲು ರಾಜ್ಯದಲ್ಲಿಯೇ ವಿನೂತನವಾಗಿ ಶಾಲೆಗಳಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ ಬಿಸಿಹಾಲು, ಮೊಟ್ಟೆ, ಬಾಳೆಹಣ್ಣು / ಶೇಂಗಾ ಚಿಕ್ಕಿಯನ್ನು ವಿತರಿಸುವ ಕಾರ್ಯಕ್ರಮವನ್ನು ಮದ್ಯಾಹ್ನ ಬಿಸಿಯೂಟದೊಂದಿಗೆ ಕಳೆದ ಸಾಲಿನಿಂದ ಪೂರ್ವ ಪ್ರಾಥಮಿಕ ಶಾಲೆಗಳ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಸೇರಿದಂತೆ ಎಲ್ಲಾ 1-10 ನೇ ತರಗತಿಯ 55 ಲಕ್ಷ ವಿದ್ಯಾರ್ಥಿಗಳಿಗೆ ಉಲ್ಲೇಖ – 1 ರಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮುನ್ನಡೆಸಿಕೊಂಡು ಬರುತ್ತಿದೆ.
ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿರುವ ಶಾಲಾ ಮಕ್ಕಳ ಶೇಕಡಾ 100ರ ಅಭಿವೃದ್ಧಿ ಉದ್ದೇಶಿತ ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಬೆಂಬಲಿಸಿ ಇದನ್ನು ಮತ್ತಷ್ಟು ಬಲವರ್ಧನೆಗೊಳಿಸಲು, ಸರ್ಕಾರದೊಂದಿಗೆ ಕೈಜೋಡಿಸಿ ರಾಜ್ಯದ ಪ್ರತಿಷ್ಠಿತ ಖಾಸಗಿ ಸಂಸ್ಥೆಯಾಗಿರುವ ಅಜೀಂ ಪ್ರೇಮ್‌ಜಿ ಫೌಂಡೇಶನ್ ಫಾರ್ ಡೆವಲೆಪ್‌ಮೆಂಟ್ (APF) ಸಂಸ್ಥೆಯು 2024-25ನೇ ಸಾಲಿನಲ್ಲಿ ಮುಂದೆ ಬಂದಿದೆ. ತನ್ನ ಸಹಭಾಗಿತ್ವದಲ್ಲಿ, ರಾಜ್ಯದ ಪೂರ್ವಪ್ರಾಥಮಿಕ ಸೇರಿದಂತೆ ಸರ್ಕಾರಿ ಮತ್ತು ಅನುದಾನಿತ 1-10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಮದ್ಯಾಹ್ನ ಬಿಸಿಯೂಟದೊಂದಿಗೆ ವಾರದಲ್ಲಿ ಹೆಚ್ಚುವರಿಯಾಗಿ ನಾಲ್ಕು ದಿನಗಳು ಸೇರಿ ವಾರದ ಒಟ್ಟು ಎಲ್ಲಾ ಆರು ಶಾಲಾ ಕರ್ತವ್ಯದ ದಿನಗಳಂದು ಮುಂದಿನ ಮೂರು ವರ್ಷಗಳ ಅವಧಿಗೆ ವಿತರಿಸಲು, ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಒಡಂಬಡಿಕೆ (Memorandum of Understanding-MoU) ಮಾಡಿಕೊಂಡಿರುತ್ತಾರೆ.
ಸೆಪ್ಟೆಂಬರ್ – 2024 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಪೂರ್ವ ಪ್ರಾಥಮಿಕ ಶಾಲೆಗಳು ಸೇರಿದಂತೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಟ್ಟು 55 ಲಕ್ಷ ವಿದ್ಯಾರ್ಥಿಗಳಿಗೆ, ಒಟ್ಟು ಆರ್ಥಿಕ ನೆರವಿನ ಅನುದಾನವಾಗಿ 1591 ಕೋಟಿ ರೂ.ಮೊತ್ತವನ್ನು ಸಂಪೂರ್ಣವಾಗಿ ತನ್ನ APF ಫೌಂಡೇಶನ್ ಸಂಸ್ಥೆಯ ಅನುದಾನದಿಂದ ಭರಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ, ಶಾಲೆಗಳಲ್ಲಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲು ಯಾದಗಿರಿ ಜಿಲ್ಲೆಯ ಆಯ್ದ ಸರ್ಕಾರಿ ಶಾಲೆಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿದೆ.
ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರು ಸರ್ಕಾರದ ಪ್ರತಿನಿಧಿಯಾಗಿ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ APF ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಅದೇ ದಿನದಂದು ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ತಾಲ್ಲೂಕುಗಳ ಶಾಸಕರು ಆಯಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಯಾವುದಾದರೂ ಒಂದು ಸರ್ಕಾರಿ ಶಾಲೆಯಲ್ಲಿ ಚಾಲನೆ ನೀಡಲಿದ್ದಾರೆ.