
ಬೆಂಗಳೂರು: 2024 -25 ನೇ ಸಾಲಿಗೆ ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆ ನೀಡಲಾಗುವುದು. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸಲಾಗುವುದು.
ಪೂರಕ ಪೌಷ್ಟಿಕ ಆಹಾರ ವಿತರಿಸುವ ಬಗ್ಗೆ ರಾಜ್ಯ ಸರ್ಕಾರ, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ, ಅಕ್ಷರ ದಾಸೋಹ ಯೋಜನೆಯಡಿ ಮೊಟ್ಟೆ ಅಥವಾ ಬಾಳೆಹಣ್ಣು ಶೇಂಗಾ ಚಿಕ್ಕಿ ವಿತರಿಸಲು ತಿಳಿಸಲಾಗಿದೆ. 2024- 25ನೇ ಸಾಲಿನಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ ಎಂಟನೇ ತರಗತಿ ಮಕ್ಕಳು ಸೇರಿದಂತೆ ಒಂಬತ್ತು ಮತ್ತು ಹತ್ತನೇ ತರಗತಿ ಮಕ್ಕಳಿಗೂ ಕೂಡ ಯೋಜನೆ ವಿಸ್ತರಿಸಲಾಗಿದೆ.
ವಾರ್ಷಿಕ ಒಟ್ಟು 80 ದಿನಗಳ ಅವಧಿಗೆ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಯೋಜನೆ ಅನುಷ್ಠಾನಗೊಳಿಸಲು ತಿಳಿಸಲಾಗಿದೆ. ಜೂನ್ 2024 ರಿಂದ ಮಾರ್ಚ್ 2025ರ ವರೆಗೆ 40 ವಾರಗಳ ಕಾಲ ವೇಳಾಪಟ್ಟಿಯಂತೆ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು ಪೌಷ್ಟಿಕ ಆಹಾರದ ರೂಪದಲ್ಲಿ ಮಧ್ಯಾಹ್ನದ ಬಿಸಿ ಊಟದೊಂದಿಗೆ ವಿತರಿಸಲು ಮಾರ್ಗಸೂಚಿ ನೀಡಲಾಗಿದೆ.
ಪ್ರತಿ ವಾರದ ಮಂಗಳವಾರ ಮತ್ತು ಗುರುವಾರ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಒಂದು ವೇಳೆ ಮಂಗಳವಾರ ಅಥವಾ ಗುರುವಾರ ರಜೆ ಘೋಷಣೆಯಾದಲ್ಲಿ ಮುಂದಿನ ದಿನ ವಿತರಿಸಲು ತಿಳಿಸಲಾಗಿದೆ.



