ಬಳ್ಳಾರಿ: 2021-22ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ/ಪ್ರೌಢ ಅನುದಾನ ರಹಿತ ಶಾಲೆಯಲ್ಲಿ ಶಾಲಾ ದಾಖಲಾತಿಗೆ ಸಂಬಂಧಿಸಿದಂತೆ ಮಕ್ಕಳ ಪಾಲಕ-ಪೋಷಕರಿಂದ ಹೆಚ್ಚುವರಿಯಾಗಿ ಶುಲ್ಕ ವಸೂಲಾತಿ ಮಾಡುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ಅನುದಾನ ರಹಿತ ಪ್ರಾಥಮಿಕ ಹಾಗೂ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯಶಿಕ್ಷಕರು ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಾತಿ ಮಾಡುವಂತಿಲ್ಲ. ಶಾಲಾ ಆವರಣದಲ್ಲಿ ಹಾಗೂ ಪೂರ್ವ ನಿಗದಿತ ಸ್ಥಳಗಳಲ್ಲಿ ತಮ್ಮ ಸಂಸ್ಥೆಯವರು ಮಾರಾಟ ಮಾಡುವ ಪಠ್ಯ-ಪುಸ್ತಕಗಳು, ಶೂ ಮತ್ತು ಸಾಕ್ಸ್ ಖರೀದಿಸಲು ಮಕ್ಕಳ ಪಾಲಕರಿಗೆ ಒತ್ತಾಯಿಸುವಂತಿಲ್ಲ. ಪಾಸಾದ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡಲು ಅನ್ಯಕಾರಣಗಳನ್ನು ಹೇಳಿ ಪಾಲಕರಿಗೆ ಸತಾಯಿಸುವಂತಿಲ್ಲ. ಪೋಷಕರಿಂದ ಯಾವುದೇ ರೀತಿಯ ದೂರುಗಳು ಬಾರದ ರೀತಿಯಲ್ಲಿ ಆನ್‍ಲೈನ್ ತರಗತಿಗಳು ಭೇದಭಾವ ಇಲ್ಲದೆ ಎಲ್ಲಾ ವರ್ಗದ ಮಕ್ಕಳಿಗೆ ಬೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಸದರಿ ಸುತ್ತೋಲೆಯನ್ನು ತಮ್ಮ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸುವುದು, ಸಿಆರ್‍ಪಿಗಳ ಮೂಲಕ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಈ ಎಲ್ಲಾ ಆದೇಶಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.