ಬೆಂಗಳೂರು: ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳ ಪಟ್ಟಿ ಸಿದ್ದುಪಡಿಸಲಾಗಿದ್ದು, ಪರೀಕ್ಷೆ ಮುಗಿದ ನಂತರ ಕಾನೂನು ಕ್ರಮ ಜರುಗಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆ ವೆಬ್ ಸೈಟ್ ನಲ್ಲಿ ಜಿಲ್ಲಾವಾರು ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲಾ ಜಿಲ್ಲೆಗಳ ಅಧಿಕೃತ ಶಾಲೆಗಳ ಪಟ್ಟಿ ಸಿದ್ಧಪಡಿಸಿದ್ದು, ಎಲ್ಲಾ ತರಗತಿ ಮಕ್ಕಳಿಗೂ ಪರೀಕ್ಷೆ ಆರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರಮ ಕೈಗೊಂಡರೆ ಮಕ್ಕಳಿಗೆ ಸಮಸ್ಯೆ ಆಗಬಹುದು. ಹೀಗಾಗಿ ಪರೀಕ್ಷೆ ಮುಗಿದ ನಂತರ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಎಲ್ಲಾ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪೋಷಕರ ಮಾಹಿತಿಗಾಗಿ ಶಿಕ್ಷಣ ಇಲಾಖೆ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಪೋಷಕರಿಗೆ ಪರಿಶೀಲನೆ ನಡೆಸಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಅನುಕೂಲವಾಗುತ್ತದೆ ಎಂದರು.