ಶಿವಮೊಗ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2023-24ನೇ ಸಾಲಿಗೆ ಸೆಪ್ಟಂಬರ್ ನಿಂದ ಡಿಸೆಂಬರ್ ಮಾಹೆಯಲ್ಲಿ ಎನ್.ಎಂ.ಎಂ.ಎಸ್. ಪರೀಕ್ಷೆ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರೀಕ್ಷೆಯು ಡಿ. 17 ರಂದು ನಡೆಯಲಿದ್ದು, ಅರ್ಜಿಯನ್ನು ಆನ್‍ಲೈನ್ ಕೆ.ಎಸ್.ಇ.ಎ.ಬಿ. ವೆಬ್‍ಸೈಟಿನ ಎನ್.ಎಂ.ಎಂ.ಎಸ್. ಲಾಗಿನ್‍ನಲ್ಲಿ ಅ.4 ರೊಳಗಾಗಿ ಸಲ್ಲಿಸುವುದು. ಪರೀಕ್ಷೆಯು ಕನ್ನಡ, ಆಂಗ್ಲ, ಉರ್ದು, ಮರಾಠಿ, ತೆಲುಗು ಮಾಧ್ಯಮಗಳಲ್ಲಿ ಇದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 12,000 ರೂ. ವಿದ್ಯಾರ್ಥಿವೇತನ (9-12ನೇ ತರಗತಿವರೆಗೆ) ನೀಡಲಾಗುತ್ತದೆ.
ಸರ್ಕಾರಿ ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರಬೇಕು, 7ನೇ ತರಗತಿಯಲ್ಲಿ ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೇ. 55 ಅಂಕಗಳನ್ನು ಗಳಿಸಿರಬೇಕು. ಪ.ಜಾ/ಪ.ಪಂ.ದ ವಿದ್ಯಾರ್ಥಿಗಳು ಶೇ.50 ಅಂಕ ಗಳಿಸಿರಬೇಕು. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನವು 3.5 ಲಕ್ಷ ರೂ. ಮೀರಿರಬಾರದು.
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು 9, 11 ಮತ್ತು 12ನೇ ತರಗತಿಗಳಲ್ಲಿ ಶೇ.55 ಹಾಗೂ 10ನೇ ತರಗತಿಯಲ್ಲಿ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಶೇ. 60 ಅಂಕ ಗಳಿಸಬೇಕು. ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳಿಗೆ ಶೇ. 5 ಅಂಕ ವಿನಾಯಿತಿ ಇರುತ್ತದೆ.