ಶಿವಮೊಗ್ಗ: ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನ ಯೋಜನೆಯಾದ “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೆ ಒಟ್ಟು 12,611 ವಿದ್ಯಾರ್ಥಿಗಳಿಗೆ 3,25,05500 ರೂ. ವಿದ್ಯಾರ್ಥಿವೇತನ ನೀಡಲಾಗಿದೆ.
ರೈತ ಕುಟುಂಬದ ಎಲ್ಲ ಮಕ್ಕಳು “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ವಿದ್ಯಾರ್ಥಿ ವೇತನ ಪಡೆಯಲು ಆರ್ಹರಾಗಿರುತ್ತಾರೆ. ರೈತ ಕುಟುಂಬ ಎಂದರೆ ರಾಜ್ಯದ ಇ-ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ “ಕುಟುಂಬ” ತಂತ್ರಾಂಶದ ದತ್ತಾಂಶದಲ್ಲಿ ದಾಖಲಾಗಿರುವ ಸದಸ್ಯರಾಗಿದ್ದು, ವಿದ್ಯಾರ್ಥಿಯು ಯಾವುದೇ ವಿದ್ಯಾರ್ಥಿ ವೇತನ ಪಡೆಯತ್ತಿದ್ದರೂ, “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ವಿದ್ಯಾರ್ಥಿವೇತನ ಪಡೆಯಲು ಆರ್ಹರಾಗಿರುತ್ತಾರೆ.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ವಿತರಿಸಲು ರಾಜ್ಯದ ವಿವಿಧ ಇಲಾಖೆಗಳು ನಿರ್ವಹಿಸುತ್ತಿರುವ ಶೈಕ್ಷಣಿಕ ಹಾಗೂ ಇತರೆ ದತ್ತಾಂಶ ಆಧಾರದ ಮೇಲೆ ಅರ್ಹ ಫಲಾನುಭವಿಗಳನ್ನು ಗುರತಿಸಲಾಗುವುದು(On Entitlement Basis). ವಿದ್ಯಾರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹ ಪ್ರಕರಣಗಳನ್ನು ಸಹ ಪರಿಗಣಿಸಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮಾಡಲಾಗುವುದು.
ಪದವಿ ಮುಂಚಿನ ಕೋರ್ಸ್‍ಗಳು, ಪದವಿ, ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲಾಗುವುದು.
ಪ್ರೌಢಶಾಲಾ ಹೆಣ್ಣುಮಕ್ಕಳಿಗೂ ವಿದ್ಯಾನಿಧಿ :
ದಿನಾಂಕ 10-12-2021 ಆದೇಶ ಸಂಖ್ಯೆ AGRI-AML/141/2021 ಮೂಲಕ 8 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ರೈತರ ಹೆಣ್ಣು ಮಕ್ಕಳಿಗೂ ಸಹ ವಾರ್ಷಿಕವಾಗಿ ರೂ.2000/- ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ಈ ಶಿಷ್ಯ ವೇತನವನ್ನು ಯಾವುದಾದರು ಒಂದು ವಿಧದ ಕೋರ್ಸ್‍ಗೆ ನೀಡಲಾಗುವುದು. ಉದಾಹರಣೆಗೆ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಕೂಡ ಬೇರೆ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಮತ್ತೆ ಪ್ರವೇಶಾತಿ ಪಡೆದರೆ ಆ ವಿದ್ಯಾರ್ಥಿ ಮತ್ತೆ ಶಿಷ್ಯ ವೇತನವನ್ನು ಪಡೆಯಲು ಅರ್ಹರಾಗುವುದಿಲ್ಲ.
ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೆ ಒಟ್ಟು 12,611 ವಿದ್ಯಾರ್ಥಿಗಳಿಗೆ (ಹೊಸನಗರ 945, ಶಿವಮೊಗ್ಗ 3131, ಶಿಕಾರಿಪುರ 2404, ಭದ್ರಾವತಿ 1452, ತೀರ್ಥಹಳ್ಳಿ 906, ಸೊರಬ 1866 ಮತ್ತು ಸಾಗರ 1907) ಒಟ್ಟು ರೂ. 3,25,05500/- ಮೊತ್ತ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಕಿರಣ್‍ಕುಮಾರ್ ತಿಳಿಸಿದ್ದಾರೆ.