ಬೆಂಗಳೂರು: ಪರಿಶಿಷ್ಟರ ಉಪಯೋಜನೆ ಎಸ್.ಸಿ.ಪಿ./ಟಿ.ಎಸ್.ಪಿ. ಅಡಿ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸುವುದಿಲ್ಲ. ಈ ಕುರಿತಾದ ವರದಿ ಅವಾಸ್ತವಿಕ ಎಂದು ಸಿಎಂ ಸಚಿವಾಲಯ ಸ್ಪಷ್ಟಪಡಿಸಿದೆ.
ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆ ಅಡಿ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 34,294 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 13ರಷ್ಟು ಅಂದರೆ 4,031 ಕೋಟಿ ರೂಪಾಯಿ ಹೆಚ್ಚಳವಾಗಿದೆ.
ಈ ಅನುದಾನದಲ್ಲಿ 11,144 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಒದಗಿಸಲಾಗಿದ್ದು, ಇಷ್ಟು ಹಣವನ್ನು ಕಡ್ಡಾಯವಾಗಿ ಪರಿಶಿಷ್ಟ ಕಲ್ಯಾಣಕ್ಕೆ ಬಳಸಲಾಗುವುದು ಎಂದು ಸ್ಪಷ್ಟನೆ ನೀಡಲಾಗಿದೆ. ಪರಿಶಿಷ್ಟ ಯೋಜನೆ ಅನುದಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ 5075 ಕೋಟಿ ರೂ., ಅನ್ನಭಾಗ್ಯಕ್ಕೆ 2779.97 ಕೋಟಿ ರೂ., ಗೃಹಜ್ಯೋತಿಗೆ 2410 ಕೋಟಿ ರೂ., ಶಕ್ತಿ ಯೋಜನೆಗೆ 812 ಕೋಟಿ ರೂ., ಯುವನಿಧಿ ಯೋಜನೆಗೆ 67.50 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಈ ಹಣವನ್ನು ಪರಿಶಿಷ್ಟ ಫಲಾನುಭವಿಗಳಿಗೆ ಮಾತ್ರ ಬಳಸಲು ಸೂಚಿಸಲಾಗಿದೆ. ಈ ಕುರಿತು ನೋಡಲ್ ಏಜೆನ್ಸಿ ಮೂಲಕ ಪರಿಶೀಲನೆ ನಡೆಸುವುದಾಗಿ ಸಿಎಂ ಸಚಿವಾಲಯ ತಿಳಿಸಿದೆ.