ಹೈದರಾಬಾದ್: ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಕಳ್ಳನೊಬ್ಬ ಸಿಕ್ಕಿಬೀಳುವ ಭಯದಲ್ಲಿ ಕಳವು ಮಾಡಿದ್ದ ಹಣವನ್ನು ಹಿಂತಿರುಗಿಸಿದ್ದಾನೆ.
ದುಬ್ಬಾತಾಂಡಾದಲ್ಲಿರುವ ರೈತ ಗುಗುಲೋತ್ ಲಚ್ಚಾರಾಮ್ ಅವರ ಮನೆಯಲ್ಲಿ ಮಾರ್ಚ್ 17 ರಂದು 1.7 ಲಕ್ಷ ರೂಪಾಯಿಯನ್ನು ಕಳ್ಳನೊಬ್ಬ ದೋಚಿಕೊಂಡು ಹೋಗಿದ್ದು, ಲಚ್ಚಾರಾಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ವಾನದಳದೊಂದಿಗೆ ಲಚ್ಚಾರಾಮ್ ಮನೆಗೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕಳ್ಳನ ಪತ್ತೆಗೆ ಮುಂದಾಗಿದ್ದಾರೆ. ಈ ವಿಚಾರ ತಿಳಿದ ಕಳ್ಳ ಶ್ವಾನಗಳು ತನ್ನನ್ನು ಗುರುತಿಸಬಹುದು ಎನ್ನುವ ಭಯದಿಂದ ಮಾರ್ಚ್ 21 ರಂದು ಲಚ್ಚಾರಾಮ್ ಮನೆ ಬಾಗಿಲಲ್ಲಿ 1 ಲಕ್ಷ ರೂ. ಇಟ್ಟು ಹೋಗಿದ್ದಾನೆ. ಮರುದಿನ ಮಾರ್ಚ್ 22 ರಂದು 70 ಸಾವಿರ ರೂಪಾಯಿ ಇಟ್ಟು ಹೋಗಿದ್ದಾನೆ. ಮನೆಬಾಗಿಲಲ್ಲಿ ಹಣ ಗಮನಿಸಿದ ಲಚ್ಚಾರಾಮ್ ಅದನ್ನು ತೆಗೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳವು ಮಾಡಿದ ಹಣವನ್ನು ವಾಪಸ್ ನೀಡಿದ ಬಗ್ಗೆ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಪೊಲೀಸರು, ಮತ್ತು ಶ್ವಾನದಳ ಕಳ್ಳನನ್ನು ಪತ್ತೆ ಮಾಡಿಲ್ಲ. ಕಳ್ಳ ಹಿಂತಿರುಗಿಸಿದ ಹಣವನ್ನು ಲಚ್ಚಾರಾಮ್ ನಿಂದ ವಶಕ್ಕೆ ಪಡೆದುಕೊಂಡ ಪೊಲೀಸರು ಕಳ್ಳನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.