
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನೇ ಅಲುಗಾಡುವಂತೆ ಮಾಡಿವೆ. ಜಾರಿ ನಿರ್ದೇಶನಾಲಯ ಇವೆರಡು ಪ್ರಕರಣಗಳ ತನಿಖೆ ಕೈಗೊಂಡಿದೆ.
ಇದೆ ವೇಳೆ ಕರ್ನಾಟಕ ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸಭೆ ನಡೆಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ ಬರೋಬ್ಬರಿ 19.34 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ.
ಸೊಸೈಟಿಯ ಪ್ರಭಾರ ಸಿಇಒ ಸೇರಿ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸೊಸೈಟಿ ಅಧ್ಯಕ್ಷ ರಾಜು ಎಂಬುವರು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಭಾರ ಸಿಇಒ ಆಶಾಲತಾ, ಅವರ ಪತಿ ಸೋಮಶೇಖರ, ಬಿಡಿಸಿಸಿ ಅಧ್ಯಕ್ಷ, ಬ್ಯಾಂಕ್ ಮ್ಯಾನೇಜರ್, ಆಡಿಟರ್ ಸೇರಿ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
2017 ರಿಂದ 2023ರ ವರೆಗೆ ಸೊಸೈಟಿಯಲ್ಲಿ ಎಫ್.ಡಿ. ರೂಪದಲ್ಲಿದ್ದ 19.34 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಅನೇಕರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ನಂತರ ಅಕ್ರಮ ಮುಚ್ಚಿಡಲು 101 ಎಫ್.ಡಿ. ಖಾತೆಗಳ ನಕಲಿ ಠೇವಣಿ ಬಾಂಡ್ ಸೃಷ್ಟಿಸಲಾಗಿದೆ.
ಅಧ್ಯಕ್ಷರ ಸಹಿಯನ್ನು ಕೂಡ ನಕಲಿ ಮಾಡಲಾಗಿದೆ. ಈ ಬಗ್ಗೆ ಸಚಿವರ ಗಮನಕ್ಕೆ ಬಂದು ಪ್ರಶ್ನಿಸಿದಾಗ ಸೊಸೈಟಿ ಹಣವನ್ನು ಅಪೆಕ್ಸ್ ಬ್ಯಾಂಕಿನಲ್ಲಿ, ಬಿಡಿಸಿಸಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವುದಾಗಿ ತಿಳಿಸಿದ್ದಾರೆ. ಆದರೆ ಪರಿಶೀಲನೆ ನಡೆಸಿದಾಗ ಅಕ್ರಮ ಹಣ ವರ್ಗಾವಣೆ ನಡೆಸಿರುವುದು, ನಕಲಿ ಠೇವಣಿ ಬಾಂಡ್ ಗಳ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.