ನವದೆಹಲಿ: ಭಾರತದಲ್ಲಿ ಕೊರೋನಾ ಎರಡನೇ ಅಲೆ ತೀವ್ರ ಏರಿಕೆ ಕಂಡಿದ್ದು, ವ್ಯಾಕ್ಸಿನೇಷನ್ ಕಾರ್ಯ ಪ್ರಗತಿಯಲ್ಲಿದೆ. ವ್ಯಾಕ್ಸಿನ್ ಪಡೆಯಲು ಆನ್ಲೈನ್ನಲ್ಲಿ ನೋಂದಣಿ ಮಾಡಬೇಕಿದ್ದು, ಇದನ್ನು ದುರ್ಬಳಕೆ ಮಾಡಿಕೊಂಡು ವಂಚಕರು ಜನರನ್ನು ಮೋಸ ಮಾಡುತ್ತಿದ್ದಾರೆ. ಲಸಿಕೆ ಪಡೆದುಕೊಳ್ಳಲು ಸಹಾಯ ಮಾಡುವ ಭರವಸೆಯೊಂದಿಗೆ ಬ್ಯಾಂಕಿಂಗ್ ಮಾಹಿತಿಗಳನ್ನು ಪಡೆದು ವಂಚಿಸುತ್ತಿದ್ದಾರೆ.
ಸದ್ಯ ದೇಶದಲ್ಲಿ ಲಸಿಕೆಯ ಕೊರತೆಯಿಂದಾಗಿ ನೋಂದಣಿ ಕಾಯ್ದಿರಿಸುವುದು ಕಷ್ಟವಾಗಿದೆ. ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ವಂಚಕರು ಕೋವಿನ್ ಲಸಿಕೆ ಆನ್ ಲೈನ್ ನೋಂದಣಿಗೆ ನೆರವು ನೀಡುವುದಾಗಿ ವೈಯಕ್ತಿಕ ಮಾಹಿತಿ ಪಡೆದು ಹಣ ದೋಚುತ್ತಿದ್ದಾರೆ. ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.
ಕೋವಿನ್ ವೆಬ್ಸೈಟ್ ನಲ್ಲಿ ಲಸಿಕೆ ನೋಂದಣಿ ಮಾಡಿಸಲು ನೆರವಾಗುವ ನೆಪದಲ್ಲಿ ಮೋಸ ಮಾಡುತ್ತಾರೆ. ಸಹಾಯದ ನೆಪದಲ್ಲಿ ಸರ್ಕಾರ ಅಥವಾ ಕೆಲವು NGO ಗಳಿಂದ ಕರೆ ಮಾಡುವಂತೆ ನಂಬಿಸಿ ವಂಚಿಸುವ ಸಾಧ್ಯತೆ ಇದೆ. ಕೆಲವೊಮ್ಮೆ ನೇರವಾಗಿ ಹಣ ಪಡೆಯುವ ಅಥವಾ ಪಾಸ್ವರ್ಡ್ ಪಡೆದು ವಂಚಿಸುವ ಸಾಧ್ಯತೆ ಇದೆ.
ಇಲ್ಲವೇ ಕೆಲವು ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಲು ಹೇಳಿ ಪಾಸ್ವರ್ಡ್ ಗಳನ್ನು ಪಡೆದು ನಂತರ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿಕೊಳ್ಳಬಹುದಾದ ಸಾಧ್ಯತೆ ಇರುತ್ತದೆ. ನಿರ್ದಿಷ್ಟವಲ್ಲದ ನಂಬರ್ ಗಳಿಂದ ಎಪಿಕೆ ಫೈಲ್ ಅಥವಾ ಎಸ್ಎಂಎಸ್ ನೀವು ನೋಡಿದರೆ ಅದು ನಕಲಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುವುದು ಎಂಬುದು ನಿಮಗೆ ತಿಳಿದಿರಲಿ.
ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿ ಇಲ್ಲವೆ ಇತರೆ ಪ್ಲಾಟ್ಫಾರಂಗಳಲ್ಲಿ ಸಂದೇಶ ನೀಡಿ ನಿಮಗೆ ಲಸಿಕೆ ಬುಕ್ ಮಾಡಲ್ಪಟ್ಟಿದೆ ಎಂದು ತಿಳಿಸಲಾಗುತ್ತದೆ. ಆ ರೀತಿ ಸಂದೇಶಗಳು ಲಿಂಕ್ ಗಳನ್ನು ಹೊಂದಿರುತ್ತವೆ. ಇಂತಹ ಲಿಂಕ್ ಗಳು ಸಾಮಾನ್ಯವಾಗಿ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಕದಿಯುವ ಫಿಶಿಂಗ್ ಪ್ರಯತ್ನವಾಗಿದೆ.
ಲಸಿಕೆ ನೊಂದಣಿ ಮತ್ತು ಹಣ ಪಾವತಿಗೆ ಸಂಬಂಧಿಸಿದಂತೆ ವಾಟ್ಸಾಪ್ ಅಥವಾ ಇತರ ಯಾವುದೇ ಪ್ಲಾಟ್ಫಾರಂ ಜೊತೆಗೆ ಪಾಲುದಾರಿಕೆ ಇರುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.
ಸಂದೇಶಗಳನ್ನು ಇ-ಮೇಲ್ ಮೂಲಕವೂ ಕಳಿಸಿ ನಿಮಗೆ ವಂಚಿಸಬಹುದಾದ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಲಸಿಕೆಗೆ ನೋಂದಾಯಿಸಿಕೊಂಡವರಿಗೆ ಕೋವಿನ್ 4 ಅಂಕಿಯ ಭದ್ರತಾ ಕೋಡ್ ಬಗ್ಗೆ ಕೇಳುವ ಕರೆಗಳು ಬರಬಹುದು. ಲಸಿಕೆ ಕೇಂದ್ರಗಳಲ್ಲಿನ ಅಧಿಕೃತ ಸಿಬ್ಬಂದಿಯನ್ನು ಹೊರತುಪಡಿಸಿ ಯಾರಿಗೂ ಈ ಕೋವಿನ್ 4-ಅಂಕಿಯ ಭದ್ರತೆ ಕೋಡ್ ಹಂಚಿಕೊಳ್ಳಬೇಡಿ. ಇಂತಹ ಕೋಡ್ ಗಳ ಬಗ್ಗೆ ಯಾವುದೇ ಸರ್ಕಾರಿ ಅಧಿಕಾರಿ ನಿಮ್ಮನ್ನು ದೂರವಾಣಿಯಲ್ಲಿ ಕೇಳುವುದಿಲ್ಲ ಎಂಬುದು ತಿಳಿದಿರಲಿ.
ಸಹಾಯದ ನೆಪದಲ್ಲಿ ನಿಮ್ಮ ಯಾವುದೇ ಮಾಹಿತಿಯನ್ನು ಕೇಳುವವರಿಗೆ ಹಂಚಿಕೊಳ್ಳಬೇಡಿ. ಅಂಡ್ರಾಯ್ಡ್ ಮೊಬೈಲ್ ಗಳಿಗೆ ಬರುವ ಲಿಂಕ್ ಕ್ಲಿಕ್ ಮಾಡಬೇಡಿ. ನಕಲಿ ಆಪ್ ಡೌನ್ಲೋಡ್ ಮಾಡಬೇಡಿ. ಅಪರಿಚಿತ ಸಂಖ್ಯೆಗಳಿಂದ ಬರುವ ಎಸ್ಎಂಎಸ್ ಗಳ ಬಗ್ಗೆ ಎಚ್ಚರಿಕೆ ವಹಿಸಿರಿ.
ಅಧಿಕೃತ ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ಅಥವಾ ಕೋವಿನ್ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಮಾತ್ರ ನೀವು ಲಸಿಕೆಯ ಸ್ಲಾಟ್ ಕಾಯ್ದಿರಿಸಬಹುದಾಗಿದೆ. ಇಂತಹ ಅಧಿಕೃತ ಕೋವಿನ್ ವೆಬ್ ಸೈಟ್ ಅಥವಾ ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ಮಾತ್ರ ನೋಂದಾಯಿಸಬಹುದಾಗಿದೆ.