ಸುಪ್ರೀಂ ಕೋರ್ಟ್ ಸಿಬಿಎಸ್ಇ ಅಂಕ ಸುಧಾರಣೆ ಹಾಗೂ ವಿಭಾಗೀಯ ಪರೀಕ್ಷಾ ಕಾರ್ಯಕ್ರಮ ಮತ್ತು ಸೆಪ್ಟೆಂಬರ್ 12ರಂದು ನಡೆಯಲಿರುವ ನೀಟ್ ಪರೀಕ್ಷೆಯ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 2 ಅರ್ಜಿಗಳ ಸಂಬಂಧ ವಿಚಾರಣೆ ನಡೆಸಿದೆ. ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ನೀಟ್ ಪರೀಕ್ಷೆಯನ್ನು ಸ್ಥಗಿತಗೊಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ.
ಮೊದಲು ನೀಟ್ ಪರೀಕ್ಷೆಯನ್ನು ಏಪ್ರಿಲ್ ತಿಂಗಳಲ್ಲಿ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಪರೀಕ್ಷೆ ಸ್ಥಗಿತಗೊಂಡಿತ್ತು.
ಜುಲೈ 12ರಂದು ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದು – ನೀಟ್ ಪರೀಕ್ಷೆಯನ್ನು ಸೆಪ್ಟೆಂಬರ್ 12ರಂದು ನಡೆಸಲಾಗುತ್ತದೆ ಕೋವಿಡ್ 19 ಮಾರ್ಗಸೂಚಿಗಳನ್ನು ಪಾಲಿಸಿ ಈ ಪರೀಕ್ಷೆಯನ್ನು ಆಯೋಜಿಸುತ್ತೇವೆ ಎಂದು ಮಾಹಿತಿ ನೀಡಿದ್ದರು.
ನೀಟ್ ಯುಜಿ ಪರೀಕ್ಷೆ ಇದೇ ಮೊದಲ ಬಾರಿಗೆ 13 ಭಾಷೆಗಳಲ್ಲಿ ನಡೆಯಲಿದೆ. ಪಂಜಾಬಿ ಹಾಗೂ ಮಲಯಾಳಿ ಭಾಷೆಯನ್ನೂ ಈ ಬಾರಿ ಸೇರಿಸಲಾಗಿದೆ. ಅದೇ ರೀತಿ ಪಶ್ವಿಮ ಏಷ್ಯಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುವೈತ್ನಲ್ಲೂ ನೀಟ್ ಹೊಸ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ನೀಟ್ ಪರೀಕ್ಷೆಯು ಹಿಂದಿ, ಪಂಜಾಬಿ, ಅಸ್ಸಾಮಿ, ಬಂಗಾಳಿ, ಓಡಿಯಾ, ಗುಜರಾತಿ, ಮರಾಠಿ, ತೆಲುಗು, ಮಲಯಾಳಂ, ಕನ್ನಡ, ತಮಿಳು , ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಡೆಯಲಿದೆ.
ಕೊರೊನಾ ಸೋಂಕಿನ ಭಯ ಇರುವ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುವುದರಿಂದ 155 ನಗರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ 198 ನಗರಗಳಲ್ಲಿ ನಡೆಯಲಿದೆ. ಕಳೆದ ವರ್ಷ ನೀಟ್ ಯುಜಿ ಪರೀಕ್ಷೆಯು 3862 ಕೇಂದ್ರಗಳಲ್ಲಿ ನಡೆದಿತ್ತು.
ಕೇಂದ್ರ ಶಿಕ್ಷಣ ಮಂತ್ರಿ ಪ್ರಧಾನ್ ನೀಡಿರುವ ಮಾಹಿತಿಯ ಪ್ರಕಾರ ಕೋವಿಡ್ 19 ಮಾರ್ಗಸೂಚಿಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಮಾಸ್ಕ್ ವ್ಯವಸ್ಥೆ ಮಾಡಲಾಗುತ್ತದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸೇಷನ್ ಕಡ್ಡಾಯವಾಗಿ ಇರಲಿದೆ.