ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದ ವಕೀಲೆ, ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ಜಡ್ಜ್ ಆಗಿ ನೇಮಕ ಮಾಡಲಾಗಿದ್ದು, ಇದನ್ನು ಪ್ರಶ್ನಿಸಿ ಈಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಮದ್ರಾಸ್ ಹೈಕೋರ್ಟ್ ಹಿರಿಯ ವಕೀಲ ರಾಜು ರಾಮಚಂದ್ರನ್ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದು, ಇದರ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಸಮ್ಮತಿಸಿದೆ. ಅಲ್ಲದೆ ಫೆಬ್ರವರಿ 10ಕ್ಕೆ ನಿಗದಿಯಾಗಿದ್ದ ವಿಚಾರಣೆಯನ್ನು ಫೆಬ್ರವರಿ 7ರಂದು ನಡೆಸಲು ಒಪ್ಪಿಗೆ ಸೂಚಿಸಿದೆ.
ಮದ್ರಾಸ್ ಹೈಕೋರ್ಟ್ ಮಧುರೈ ಪೀಠದಲ್ಲಿ ಕೇಂದ್ರ ಸರ್ಕಾರದ ಪರ ವಕೀಲೆಯಾಗಿ ಕಾರ್ಯನಿರ್ವಹಿಸಿದ್ದ ವಿಕ್ಟೋರಿಯಾ ಗೌರಿ ಅವರಿಗೆ ಹೈಕೋರ್ಟ್ ಹೆಚ್ಚುವರಿ ಜಡ್ಜ್ ಆಗಿ ನೇಮಕ ಮಾಡಲು ಹೈಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.
ಆದರೆ ಇದಕ್ಕೆ ವಕೀಲರ ಒಂದು ವರ್ಗದಿಂದ ವಿರೋಧ ವ್ಯಕ್ತವಾಗಿದ್ದರೆ ಮತ್ತೊಂದು ವರ್ಗ ಸ್ವಾಗತ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ವಿಕ್ಟೋರಿಯಾ ಗೌರಿ ನವ ಭಾರತ ನಿರ್ಮಾಣಕ್ಕೆ ಬಿಜೆಪಿ ಸೇರ್ಪಡೆಯಾಗುವಂತೆ ಪ್ರಚಾರ ನಡೆಸಿದ್ದರು. ಅಲ್ಲದೆ ಇಸ್ಲಾಂಗಿಂತ ಕ್ರಿಶ್ಚಿಯನ್ ಧರ್ಮದಿಂದ ಭಾರತಕ್ಕೆ ಗಂಡಾಂತರವಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.