alex Certify ಗಮನಿಸಿ : ಶಾಲಾ, ಕಾಲೇಜುಗಳ ಶುಲ್ಕ ಕಟ್ಟಿಲ್ಲ ಎಂದು SC/ST ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಶಾಲಾ, ಕಾಲೇಜುಗಳ ಶುಲ್ಕ ಕಟ್ಟಿಲ್ಲ ಎಂದು SC/ST ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ..!

ದಾವಣಗೆರೆ : ತಳಸಮುದಾಯದಲ್ಲಿ ಅಜ್ಞಾನದಿಂದ ಮೂಡನಂಬಿಕೆಗಳಿಗೆ ಕಟ್ಟುಬಿದ್ದು ಸಾಮಾಜಿಕ ಪಿಡುಗುಗಳ ಆಚರಣೆಯಲ್ಲಿ ತೊಡಗಿದವರಿಗೆ ಜಾಗೃತಿ ಮೂಡಿಸುವ ಜೊತೆಗೆ ಅಶಕ್ತರಿಗೆ ನೆರವಾಗುವ ಮೂಲಕ ಸಮ ಸಮಾಜ ನಿರ್ಮಾಣ, ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಅಧಿಕಾರಿ ವರ್ಗದವರು ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕೆಂದು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇಂದ್ರಸ್ವಾಮಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಅನುಸೂಚಿತ ಜಾತಿ ಮತ್ತು ಪಂಗಡಗಳ ಜನಾಂಗದವರ ಅಭಿವೃದ್ದಿಗಾಗಿ 2013 ರ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿರಿಸಲಾಗುತ್ತಿದೆ. ಮೀಸಲಿರಿಸಿದ ಅನುದಾನವನ್ನು ಈ ಜನಾಂಗದ ಅಭಿವೃದ್ದಿಗಾಗಿಯೇ ವೆಚ್ಚ ಮಾಡಬೇಕೆಂದು ಕಾಯಿದೆಯಲ್ಲಿದೆ. ಪರಿಶಿಷ್ಟರ ಅನುದಾನದ ಮೂಲಕ ಎಸ್ಸಿ, ಎಸ್ಟಿ ಜನರ ಜೀವನ ಮಟ್ಟ ಸುಧಾರಣೆ, ಶೈಕ್ಷಣಿಕ ಅಭಿವೃದ್ದಿ, ಸಾಮಾಜಿಕ ಪಿಡುಗಗಳ ನಿವಾರಣೆ ಜೊತೆಗೆ ಅವರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕೆಂದು ಸೂಚನೆ ನೀಡಿದರು.

ಟೆಂಡರ್ನಲ್ಲಿ ಪ್ಯಾಕೇಜ್ ಸಲ್ಲದು; ಎಲ್ಲಾ ಅನುಷ್ಟಾನ ಇಲಾಖೆಯಲ್ಲಿ ಕಾಮಗಾರಿ, ಸೇವಾ ಟೆಂಡರ್ಗಳನ್ನು ಕರೆಯುವಾಗ ರೂ.1 ಕೋಟಿ ಒಳಗಿನ ಮೊತ್ತದ ಕಾಮಗಾರಿಗೆ ಮೀಸಲಾತಿಯನ್ನು ನೀಡುವುದು ಕಡ್ಡಾಯವಾಗಿದೆ. ಆದರೆ ಕೆಲವು ಇಲಾಖೆಗಳಲ್ಲಿ ಮೀಸಲಾತಿ ನೀಡುವ ಬದಲಾಗಿ ಪ್ಯಾಕೇಜ್ ಮೂಲಕ ಹಲವು ಕಾಮಗಾರಿಗಳನ್ನು ಒಂದರಲ್ಲಿ ಸೇರಿಸಿ ಕರೆಯಲಾಗುತ್ತಿದೆ. ಆದರೆ ಕಾಯ್ದೆಯನ್ವಯ ಇದು ತಪ್ಪಾಗಿದ್ದು ಅಂತಹ ಇಂಜಿನಿಯರ್ಗಳ ಮೇಲೆ ಮೊಕದ್ದೊಮೆ ದಾಖಲಿಸಲಾಗುತ್ತದೆ ಎಂದರು.

ಸ್ಮಶಾನಕ್ಕೆ ಜಾಗ ಮೀಸಲಿರಿಸಲು ಸೂಚನೆ; ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಜಾಗವು ಇರಬೇಕು, ಇಲ್ಲಿ ಎಲ್ಲಾ ಜಾತಿ, ಜನಾಂಗದವರಿಗೂ ಅವಕಾಶ ಇದ್ದಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ಪ.ಜಾತಿ ಮತ್ತು ಪಂಗಡದವರಿಗೆ ಶವಸಂಸ್ಕಾರಕ್ಕೆ ಜಾಗ ನೀಡದಿದ್ದಲ್ಲಿ ಸರ್ಕಾರಿ ಜಾಗ ಅಥವಾ ಖಾಸಗಿ ಜಾಗವನ್ನು ಖರೀದಿಸಿ ಸ್ಮಶಾನಕ್ಕೆ ಮೀಸಲಿರಿಸಲು ಸೂಚನೆ ನೀಡಿದರು. ಈ ವೇಳೆ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪನವರು ಮಾತನಾಡಿ ಪರಿಶಿಷ್ಟರು ಜಾಗವಿಲ್ಲದೇ ರಸ್ತೆ ಬದಿಯಲ್ಲಿ ಶವಸಂಸ್ಕಾರ ಮಾಡುವಂತ ನಿದರ್ಶನಗಳನ್ನು ಕಾಣಲಾಗಿದೆ ಎಂದಾಗ ಇಂತಹ ಗ್ರಾಮಗಳನ್ನು ಪಟ್ಟಿ ಮಾಡಿ ಕೂಡಲೇ ಸ್ಮಶಾನಕ್ಕೆ ಜಾಗ ಗುರುತಿಸಲು ಸೂಚನೆ ನೀಡಿದರು.

ದೇವದಾಸಿ ಪದ್ದತಿ ಸಂಪೂರ್ಣ ನಿರ್ಮೂಲನೆಗೆ ಸೂಚನೆ; ದೇವದಾಸಿ ಪದ್ದತಿ ಇದು ಅನಿಷ್ಟ ಸಾಮಾಜಿಕ ಪಿಡುಗಾಗಿದ್ದು ಇದು ಸಮಾಜದಿಂದ ನಿರ್ಮೂಲನೆಯಾಗಬೇಕಾಗಿದೆ. ಇಂತಹ ಪದ್ದತಿ ಎಂದಿಗೂ ಆಚರಣೆಯಲ್ಲಿರಬಾರದು. ಇನ್ನೂ ಕೆಲ ತಳಸಮುದಾಯದಲ್ಲಿ ಮುತ್ತುಕಟ್ಟುವ ಪದ್ದತಿ ಜಾರಿಯಲ್ಲಿದೆ ಎಂಬ ಮಾಹಿತಿ ಇದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಈ ಬಗ್ಗೆ ಮಹಿಳೆಯರು, ಸಾರ್ವಜನಿಕರಲ್ಲಿ ಕಟ್ಟುನಿಟ್ಟಿನ ಜಾಗೃತಿ ಮೂಡಿಸಬೇಕು. ಮತ್ತು ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಈ ಅನಿಷ್ಟ ಪದ್ದತಿ ಸಮಾಜದಿಂದಲೇ ನಿರ್ಮೂಲನೆಯಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದಾಗ ಈ ಪದ್ದತಿ ನಿರ್ಮೂಲನೆಗೆ ಜಿಲ್ಲಾಡಳಿತದಿಂದ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಸರ್ಕಾರಿ ಶಾಲೆಗಳ ಶಿಕ್ಷಣಕ್ಕೆ ಒತ್ತು; ಜಿಲ್ಲೆಯಲ್ಲಿನ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರಲ್ಲಿ ತಳಸಮುದಾಯದ ಮಕ್ಕಳೆ ಆಗಿದ್ದು ಇಲ್ಲಿನ ಶಾಲೆಗಳ ಮೂಲಭೂತ ಸೌಕರ್ಯ ಹೆಚ್ಚಳದ ಬಗ್ಗೆ ಮತ್ತು ಸ್ಮಾರ್ಟ್ ಕ್ಲಾಸ್ಗಳನ್ನು ನಡೆಸಲು ಸಿಎಸ್ಆರ್ ನಿಧಿಯಡಿ ಅಭಿವೃದ್ದಿ ಕೈಗೊಂಡು ಇಸ್ರೋ ಸಂಸ್ಥೆಯ ಒಡಂಬಡಿಕೆಯಡಿ ಆನ್ಲೈನ್ ಕ್ಲಾಸ್ ಕೊಡಿಸಲು ತಿಳಿಸಿ ನನ್ನ ಕ್ಷೇತ್ರದಲ್ಲಿ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ್ದು ಸ್ಮಾರ್ಟ್ ಕ್ಲಾಸ್ಗಳನ್ನು ನಡೆಸಲಾಗುತ್ತಿದೆ. ಇದೇ ಮಾದರಿಯಲ್ಲಿ ಬಡವರು, ಹಿಂದುಳಿದವರ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕೆಂದು ತಿಳಿಸಿದರು.

ಯಾವುದೇ ಖಾಸಗಿ ಶಾಲೆ, ಕಾಲೇಜಾಗಿರಲಿ ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳನ್ನು ಪ್ರವೇಶದ ವೇಳೆ ಶುಲ್ಕ ಕಟ್ಟಿಲ್ಲ ಎಂದಾಗ ಶಾಲಾ, ಕಾಲೇಜಿನಿಂದ ಹೊರಗಿಡಬಾರದು ಮತ್ತು ಪ್ರವೇಶ ನಿರಾಕರಿಸುವಂತಿಲ್ಲ. ಸರ್ಕಾರದಿಂದ ಶುಲ್ಕ ಮರುಪಾವತಿಯನ್ನು ಮಾಡಲಾಗುತ್ತದೆ. ಇಂತಹ ಪ್ರಕರಣಗಳು ಕಂಡುಬಂದಾಗ ಮುಂದಿನ ದಿನಗಳಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನದ ಮೂಲಕ ಪ್ರಕರಣಗಳನ್ನು ನೇರವಾಗಿ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಇದರ ಬಗ್ಗೆ ಗಮನಿಸಲು ಸೂಚನೆ ನೀಡಿದರು.

ಬಾಲಕಿಯರ ಹಾಸ್ಟೆಲ್ನಲ್ಲಿ ಮಹಿಳಾ ವಾರ್ಡನ್ ಕಡ್ಡಾಯ; ಯಾವುದೇ ವಸತಿ ಶಾಲೆಯಾಗಲಿ, ಹಾಸ್ಟೆಲ್ ಆಗಲಿ ಮೆಟ್ರಿಕ್ ಪೂರ್ವ ಹಾಗೂ ನಂತರದ ಹಾಸ್ಟೆಲ್ಗಳಲ್ಲಿ ಮಹಿಳಾ ವಾರ್ಡನ್ ಕಡ್ಡಾಯವಾಗಿರಬೇಕು. ಬಾಲಕಿಯರೇ ಇರುವ ಯಾವ ವಿದ್ಯಾರ್ಥಿನಿಲಯದಲ್ಲಿ ಮಹಿಳಾ ವಾರ್ಡನ್ ಬದಲಾಗಿ ಪುರುಷ ವಾರ್ಡನ್ ಇದ್ದಲ್ಲಿ ಅಂತಹ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಲ್ಲಾ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರಗಳ ಆಹಾರ ಗುಣಮಟ್ಟ ಕಾಪಾಡಲು ಸೂಚನೆ; ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರದ ಗುಣಮಟ್ಟ ಕಡಿಮೆ ಇರುತ್ತದೆ ಎಂಬ ದೂರುಗಳಿದ್ದು ಅಂಗನವಾಡಿಗೆ ಬರುವ ಮಕ್ಕಳೇ ಬಡವರ ಮಕ್ಕಳಾಗಿದ್ದು ಇವರ ಪೌಷ್ಟಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದಾಗ ಸಮಿತಿ ಸದಸ್ಯರಾದ ಹೇಮಲತಾ ನಾಯಕ್ ಮಾತನಾಡಿ ನೀಡಲಾಗುವ ಮೊಟ್ಟೆ ಹಾಗೂ ಇನ್ನಿತರೆ ಆಹಾರದಲ್ಲಿ ಗುಣಮಟ್ಟದ ಆಹಾರ ಪದಾರ್ಥ ಬಳಕೆ ಮಾಡದ ಬಗ್ಗೆ ಸಾಕಷ್ಟು ದೂರುಗಳಿದ್ದು ಪರಿಶೀಲನೆ ಮಾಡಲು ತಿಳಿಸಿದರು.

ದೌರ್ಜನ್ಯ ಕಾಯ್ದೆಯಡಿ ಶಿಕ್ಷೆಯ ಪ್ರಮಾಣ ಕಡಿಮೆ; ಪರಿಶಿಷ್ಟರ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಲು ದಾಖಲಾಗುವ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಯಾಗುವ ಪ್ರಮಾಣ ಬಹಳ ಕಡಿಮೆ ಇದ್ದು ಅಭಿಯೋಜನೆಗೆ ಬೇಕಾದ ಸಾಕ್ಷ್ಯಧಾರಗಳ ಬಗ್ಗೆ ಪರಿಶೀಲನೆ ನಡೆಸಿ ದೌರ್ಜನ್ಯ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಪರಿಶಿಷ್ಟರ ಯೋಜನೆಗಳ ಪರಿಶೀಲನೆಗೆ ಸೂಚನೆ; ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಜನರ ಅಭಿವೃದ್ದಿಗಾಗಿ ಇರುವ ಎಲ್ಲಾ ಇಲಾಖೆಗಳ ಯೋಜನೆಗಳ ಕುರಿತು ಅವಲೋಕನ ಮಾಡಬೇಕು. ಆದರೆ ನೋಡಬೇಕಾದ ಇಲಾಖೆ ಅಧಿಕಾರಿಗಳು ಹೆಚ್ಚು ಗಮನಿಸಿದಂತಿಲ್ಲ, ಎಲ್ಲಾ ಇಲಾಖೆಗಳಲ್ಲಿ ಅನುಷ್ಟಾನ ಮಾಡುವ ಎಸ್ಸಿಪಿ, ಟಿಎಸ್ಪಿ ಯೋಜನೆಗಳ ಪರಿಶೀಲನೆ ನಡೆಸಿ ಅವರ ಅಭಿವೃದ್ದಿ ಯಾವ ರೀತಿಯಾಗುತ್ತಿದೆ. ಈ ಜನರ ಕಲ್ಯಾಣಕ್ಕಾಗಿ ಯಾವ ತರಹದಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ವರದಿಯನ್ನು ದತ್ತಾಂಶದ ಸಮೇತ ಸಂಗ್ರಹಿಸಬೇಕಾದ ಒಣೆಗಾರಿಕೆ ಇಲಾಖೆಗಳ ಮೇಲಿದ್ದು ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪ, ಶಾಸಕರಾದ ವೀರೇಂದ್ರ ಪಪ್ಪಿ, ಕೃಷ್ಣನಾಯ್ಕ, ರಾಜೇಂದ್ರ ರಾಜಣ್ಣ, ದುರ್ಯೋದನ ಐಹೊಳೆ, ವಿಧಾನಮಂಡಲದ ಸಮಿತಿ ಅಧೀನ ಕಾರ್ಯದರ್ಶಿ ಪಿ.ಸೀನ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...