ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾ.ಹೆಚ್.ಎನ್. ನಾಗಮೋಹನದಾಸ್ ಸಮಿತಿ ನೀಡಿದ ವರದಿಯ ಕುರಿತಾಗಿ ಚರ್ಚಿಸಲು ವಿಧಾನ ಮಂಡಲ ಉಭಯ ಸದನಗಳ ನಾಯಕರ ಸಭೆ ಕರೆಯಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ಕರೆದಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅ. 7 ರಂದು ಬೆಳಗ್ಗೆ 11.30 ಕ್ಕೆ ಸಭೆ ನಡೆಯಲಿದ್ದು, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಭಾಗವಹಿಸಲಿದ್ದಾರೆ.
ಪರಿಶಿಷ್ಟ ಜಾತಿಯವರಿಗೆ ಶೇಕಡ 15 ರಿಂದ 17 ರಷ್ಟು ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 3 ರಿಂದ ಶೇಕಡ 7.5 ರಷ್ಟು ಮೀಸಲಾತಿ ಹೆಚ್ಚಿಸುವ ಕುರಿತು ನಾಗಮೋಹನ ದಾಸ್ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ವರದಿಯ ಎಲ್ಲಾ ಅಂಶಗಳ ಬಗ್ಗೆ ನಾಯಕರ ಸಲಹೆ ಅಭಿಪ್ರಾಯ ಪಡೆಯಲು ಸಿಎಂ ತೀರ್ಮಾನಿಸಿದ್ದಾರೆ.