ಬೆಂಗಳೂರು: ಒಳ ಮೀಸಲಾತಿ ಕುರಿತಾಗಿ ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ನೀಡಿದ ಮೀಸಲಾತಿ ಪ್ರಮಾಣದಿಂದ ಆ ಸಮುದಾಯದ ಕೆಲವರಿಗೆ ನ್ಯಾಯ ದೊರಕುತ್ತಿಲ್ಲ ಎನ್ನುವ ದೂರುಗಳಿದ್ದು, ಆಯೋಗದಿಂದ ಈ ಕುರಿತಾಗಿಯೂ ವರದಿ ಬಂದಿದೆ. ಸಮಗ್ರ ಅಧ್ಯಯನ ನಡೆಸಿ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಅದೇ ರೀತಿ ಎಲ್ಲಾ ಸಮಾಜ, ಜನಾಂಗದಲ್ಲಿಯೂ ಆಕಾಂಕ್ಷೆಗಳು ಹೆಚ್ಚಿದ್ದು, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಮೀಸಲಾತಿ ಬಗ್ಗೆಯೂ ಬೇಡಿಕೆಗಳನ್ನು ಸಮಗ್ರವಾಗಿ ಚರ್ಚಿಸಿ ನ್ಯಾಯ ದೊರಕಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯಲ್ಲಿ ಕೆಲವರಿಗೆ ನ್ಯಾಯ ದೊರಕಿಲ್ಲ. ಹೀಗಾಗಿ ಒಳ ಮೀಸಲಾತಿ ನೀಡಬೇಕೆಂಬ ಬೇಡಿಕೆ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.