ಬೆಂಗಳೂರು: ನ್ಯಾಯ ಬೆಲೆ ಅಂಗಡಿಗಳ ಮಂಜೂರಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 24.1 ರಷ್ಟು ಮೀಸಲಾತಿ ಕಲ್ಪಿಸಲು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.
ಸಮಿತಿಯು ತನ್ನ 7ನೇ ವರದಿಯನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡ 24.1 ರಷ್ಟು ಮೀಸಲಾತಿ ನೀಡಬೇಕು. ಕುಟುಂಬದಲ್ಲಿ ಯಾರೂ ಇಲ್ಲದೆ ಒಬ್ಬರೇ ಇರುವವರಿಗೆ ಮತ್ತು ಯಾವುದೇ ಆಸ್ತಿ ಇಲ್ಲದವರಿಗೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡ್ ವಿತರಿಸಲು ನಿಯಮ ರೂಪಿಸಬೇಕೆಂದು ಸಮಿತಿ ಅಭಿಪ್ರಾಯ ತಿಳಿಸಿದೆ.
ಸೊಸೈಟಿ, ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಬೇಕೆಂದು ಸಹಕಾರ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಸಿಎಸ್ಆರ್ ನಿಧಿಯಲ್ಲಿ ಶೇಕಡ 25, ಬೆಳೆ ಪರಿಹಾರ ಮೊತ್ತ ಶೇಕಡ 50ರಷ್ಟು ಹೆಚ್ಚಳ ಮಾಡಬೇಕು. ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಅನುದಾನವನ್ನು ಕಟ್ಟಡ, ಹಾಸ್ಟೆಲ್ ಮತ್ತು ಕಾಲೇಜುಗಳ ನಿರ್ಮಾಣಕ್ಕೆ ಬಳಸಿಕೊಳ್ಳದೇ ಸಮುದಾಯದ ಕಲ್ಯಾಣಕ್ಕೆ ಮಾತ್ರ ಬಳಸಬೇಕು. ಪರಿಶಿಷ್ಟ ವಿದ್ಯಾರ್ಥಿಗಳ ಶುಲ್ಕವನ್ನು ಕಾಲೇಜಿಗೆ, ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮಾ ಮಾಡಬೇಕೆಂದು ಹೇಳಲಾಗಿದೆ.