ಬೆಂಗಳೂರು: ಪರಿಶಿಷ್ಟರ ನೆರವಿಗೆ ವಿಶೇಷ ಠಾಣೆಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದಾಗಿ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ಜಿಲ್ಲೆಗೊಂದರಂತೆ ವಿಶೇಷ ಪೊಲೀಸ್ ಠಾಣೆಗಳು ಎಂದು ಘೋಷಿಸುವ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ವಿಶೇಷ ಠಾಣೆಗಳ ನಿರ್ವಹಣೆಗೆ 450 ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೇಕಡ 96ರಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ ಎಂಬ ಪ್ರಮುಖ ಕಾರಣದ ಜೊತೆಗೆ ಸಾಮಾನ್ಯ ಪೊಲೀಸ್ ಠಾಣೆಗಳ ಮೇಲಿನ ಒತ್ತಡ ತಗ್ಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.
2022ರ ಅಂತ್ಯದವರೆಗೆ 7633 ಪ್ರಕರಣ ನ್ಯಾಯಾಲಯದ ವಿಚಾರಣೆಗೆ ಬಂದಿದ್ದು, 1723 ಪ್ರಕರಣ ವಿಲೇವಾರಿಯಾಗಿವೆ. 1363 ಖುಲಾಸೆಯಾಗಿವೆ. ಕೇವಲ ಶೇ. 4ರಷ್ಟು 68 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಠಾಣೆಗಳಲ್ಲಿ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆ ಆಗುತ್ತಿಲ್ಲ. ಹೀಗಾಗಿ ವಿಶೇಷ ಪೊಲೀಸ್ ಠಾಣೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಇವುಗಳ ಕಾರ್ಯನಿರ್ವಹಣೆ ವಿಧಾನ, ಹುದ್ದೆ ಸೃಷ್ಟಿ ಮೊದಲಾದ ವಿವರಗಳನ್ನು ಅಂತಿಮಗೊಳಿಸುವ ಅಧಿಕಾರವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರಿಗೆ ಸಂಪುಟ ಸಭೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.