ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಕ್ಕೆ ಸರ್ಕಾರ ನೀಡಿದ ಭೂಮಿಯನ್ನು ಮಾರಾಟ, ವರ್ಗಾವಣೆ ಮಾಡಲು ಹಾಲಿ ಇರುವ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪರಿಶಿಷ್ಟರ ಭೂಮಿ ವರ್ಗಾವಣೆಗೆ ನಿಯಮ ಬಿಗಿಯಾಗಿದ್ದು, ಭೂಮಿ ಮಾರಾಟದ ಮುನ್ನ ಹಲವು ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಂಜೂರಾದ ಭೂಮಿಯ ವರ್ಗಾವಣೆಗೆ ಅನುಮತಿ ಕೋರುವ ಮಂಜೂರಾತಿ ಪಡೆದವರು ಅಥವಾ ಆತನ ಕಾನೂನು ಸಮ್ಮತ ವಾರಸುದಾರನು ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಯನ್ನು ತಹಶೀಲ್ದಾರ್ ಗೆ ಖುದ್ದಾಗಿ ಸಲ್ಲಿಸಬೇಕು. ತಹಶೀಲ್ದಾರ್ ಸೂಕ್ತ ವಿಚಾರಣೆ ಮಾಡಿ ದಾಖಲೆ ಪರಿಶೀಲಿಸಿ ಅಭಿಪ್ರಾಯ ದಾಖಲಿಸಿ ಉಪ ವಿಭಾಗಾಧಿಕಾರಿಗೆ ಸಲ್ಲಿಸಬೇಕು. ಉಪವಿಬಾಧಿಕಾಧಿಕಾರಿ ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಭೂಮಿ ವರ್ಗಾವಣೆಗೆ ಅನುಮತಿ ನೀಡಬಹುದು ಎಂದು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಬೇಕು.
ಪರಿಶೀಲನೆಯ ಸಂದರ್ಭದಲ್ಲಿ ದಬ್ಬಾಳಿಕೆ, ಮೋಸ, ತಪ್ಪು ತಿಳಿವಳಿಕೆ ಇರುವುದನ್ನು ಖಚಿತಪಡಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ. ಭೂಮಿಯ ವರ್ಗಾವಣೆಗೆ ಅನುಮತಿ ನಿರಾಕರಿಸುವಂತೆ ಶಿಫಾರಸು ಮಾಡತಕ್ಕದ್ದು ಎಂಬ ನಿಯಮವನ್ನು ಕೂಡ ಸೇರ್ಪಡೆ ಮಾಡಲಾಗಿದೆ.
ಈ ಮೂಲಕ ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ(ಕೆಲವು ಭೂಮಿಗಳ ವರ್ಗಾವಣೆ ನಿಷೇಧ ನಿಯಮಗಳು) 1979ರಲ್ಲಿನ ನಿಯಮಗಳನ್ನು ತಿದ್ದುಪಡಿ ಮಾಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಪರಿಶಿಷ್ಟರಿಗೆ ಮಂಜೂರು ಮಾಡಿದ ಭೂಮಿಗಳನ್ನು ಮಾರಾಟ ಇಲ್ಲವೇ ವರ್ಗಾವಣೆ ಮಾಡಲು ಕೋರಿ ಬಂದ ಅರ್ಜಿಗಳನ್ನು ಅನೇಕ ಹಂತದಲ್ಲಿ ಪರಿಶೀಲನೆ ನಡೆಸಿದ ನಂತರವೇ ಅನುಮತಿ ನೀಡಲು ಅವಕಾಶವಾಗುವಂತೆ ಬಿಗಿ ನಿಯಮಗಳನ್ನು ಸೇರ್ಪಡೆ ಮಾಡಲಾಗಿದೆ.