ಬೆಂಗಳೂರು: ಬಿಪಿಎಲ್ ಕುಟುಂಬದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗ್ರಾಹಕರಿಗೆ ಮಾಸಿಕ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಹಿಂಪಡೆದುಕೊಂಡಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.
ಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಸ್ಪಷ್ಟನೆ ನೀಡಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಟುಂಬದವರಿಗೆ ‘ಅಮೃತ ಜ್ಯೋತಿ’ ಯೋಜನೆ ಮಾಸಿಕ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ಹಿಂಪಡೆದುಕೊಂಡಿಲ್ಲ. ಆಗಸ್ಟ್ 24ರಂದು ಹೊರಡಿಸಿದ್ದ ಮಾರ್ಗಸೂಚಿ ಸುತ್ತೋಲೆಯನ್ನು ಇ – ಆಡಳಿತ ಇಲಾಖೆ ಭಾಗಶಃ ಪರಿಷ್ಕರಿಸಿದ್ದರಿಂದ ಸೆ. 3 ರಂದು ಸುತ್ತೋಲೆ ಹಿಂಪಡೆಯಲಾಗಿದೆ. ಯೋಜನೆಯನ್ನು ರದ್ದುಪಡಿಸಿಲ್ಲವೆಂದು ಸ್ಪಷ್ಟನೆ ನೀಡಲಾಗಿದೆ.
‘ಅಮೃತ ಜ್ಯೋತಿ’ ಯೋಜನೆಯನ್ನು ಇ -ಆಡಳಿತ ಇಲಾಖೆಯ ಸಹಯೋಗದಲ್ಲಿ ಡಿಬಿಟಿ ವ್ಯವಸ್ಥೆಯೊಂದಿಗೆ ಜಾರಿಗೊಳಿಸಲಾಗಿದೆ. ಫಲಾನುಭವಿ ಗ್ರಾಹಕರು ತಾವು ಪಾವತಿಸಿದ ಒಟ್ಟು ವಿದ್ಯುತ್ ಬಿಲ್ ಮೊತ್ತದಲ್ಲಿ 75 ಯೂನಿಟ್ ಗಳವರೆಗಿನ ವಿದ್ಯುತ್ ಶುಲ್ಕದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರ ಪಾವತಿ ಮಾಡಲಾಗುವುದು ಎಂದು ಹೇಳಲಾಗಿದೆ.