ಬೆಂಗಳೂರು: 2023 24ನೇ ಸಾಲಿನ ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ. -ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಅಭಿವೃದ್ಧಿಗೆ ವಿಶೇಷ ಘಟಕ ಯೋಜನೆಯಡಿ 34,300 ಕೋಟಿ ರೂ. ಕ್ರಿಯಾ ಯೋಜನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ 8 ತಿಂಗಳಿಗೆ ಅನುಮೋದಿಸಲಾದ ಕ್ರಿಯಾಯೋಜನೆ ಅನ್ವಯ ಯೋಜನೆ ಅನುಷ್ಠಾನಗೊಳಿಸಿ ಅನುದಾನ ಸಂಪೂರ್ಣವಾಗಿ ವೆಚ್ಚ ಮಾಡಬೇಕು. ಸಂಬಂಧಿಸಿದ ಇಲಾಖೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಅನುದಾನ ಉಳಿದರೆ ಅದರ ಮರುಬಳಕೆಗಾಗಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಅಭಿವೃದ್ಧಿಗೆ ವಿಶೇಷ ಘಟಕ ಯೋಜನೆ ಅನುದಾನದಲ್ಲಿ ಗ್ಯಾರಂಟಿ ಯೋಜನೆಗಳಿಗೆ 11,000 ಕೋಟಿ ರೂ. ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅನ್ಯ ಉದ್ದೇಶಕ್ಕೆ ಯೋಜನೆಯ ಅನುದಾನ ಬಳ್ಳಕೆ ಸಾಧ್ಯವಿಲ್ಲ. ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಮಾತ್ರ ಬಳಕೆ ಮಾಡಲಾಗುವುದು ಎಂದು ಸಚಿವ ಹೆಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.