ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ಹೊಂದಿರುವ ಪಡಿತರ ಚೀಟಿಗಳ ಬಗ್ಗೆ ಆಹಾರ ಇಲಾಖೆಯಿಂದ ರಾಜ್ಯ ಸರ್ಕಾರ ಮಾಹಿತಿ ಕೇಳಿದೆ.
ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ರೇಷನ್ ಪಡೆದುಕೊಳ್ಳುತ್ತಿರುವ ಎಸ್ಸಿ, ಎಸ್ಟಿ ಪಂಗಡದ ಫಲಾನುಭವಿಗಳ ಪಟ್ಟಿ ಕೇಳಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ನೀಡುವ ಸಂದರ್ಭದಲ್ಲಿ ಜಾತಿ ಕೇಳುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳ ಸಂಖ್ಯೆ ಹಾಗೂ ಈ ಕಾರ್ಡ್ ಗಳಲ್ಲಿ ಇರುವ ಸದಸ್ಯರ ಮಾಹಿತಿ ಒದಗಿಸುವಂತೆ ಸರ್ಕಾರದಿಂದ ಆಹಾರ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಹಿಂದೆ ರೇಷನ್ ಕಾರ್ಡ್ ಗೆ ಆಧಾರ್ ದೃಢೀಕರಣದೊಂದಿಗೆ ಇ-ಕೆವೈಸಿ ಮಾಡಿಸಿದ ಸಂದರ್ಭದಲ್ಲಿ ಮಾಹಿತಿ ಪಡೆಯಲಾಗಿತ್ತು. ಈ ವೇಳೆ ಕೆಲವು ಫಲಾನುಭವಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಈ ಬಾರಿಯೂ ಫಲಾನುಭವಿಗಳ ಜಾತಿ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ 1,15,93,227 ಬಿಪಿಎಲ್ ಕಾರ್ಡುಗಳಿದ್ದು, 3,87,79,975 ಫಲಾನುಭವಿಗಳಿದ್ದಾರೆ. 10,91,508 ಅಂತ್ಯೋದಯ ಕಾರ್ಡ್ ಗಳಿದ್ದು, 44,83,745 ಫಲಾನುಭವಿಗಳಿದ್ದಾರೆ, ಇವರಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಫಲಾನುಭವಿಗಳ ಮಾಹಿತಿ ಕೇಳಲಾಗ್ತಿದೆ ಎನ್ನಲಾಗಿದೆ.