ನವದೆಹಲಿ: ಇಂಜಿನಿಯರಿಂಗ್ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆ(ಗೇಟ್) ಮುಂದೂಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ನಿಗದಿಯಂತೆಯೇ ಫೆಬ್ರವರಿ 5, 6, 12 ಮತ್ತು 13 ರಂದು ಪರೀಕ್ಷೆ ನಡೆಯಲಿದೆ.
ಕೊರೋನಾ ಹಿನ್ನೆಲೆಯಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ನಿರ್ಬಂಧ ಜಾರಿಯಲ್ಲಿದೆ. ಹೀಗಾಗಿ ಪರೀಕ್ಷೆ ಮುಂದೂಡಬೇಕೆಂದು ಕೆಲವು ಅಭ್ಯರ್ಥಿಗಳು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಡಿ. ಚಂದ್ರಚೂಡ್, ಸೂರ್ಯಕಾಂತ್, ವಿಕ್ರಮ್ ನಾಥ್ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದೆ.
ಪರೀಕ್ಷೆಗೆ 48 ಗಂಟೆಗೆ ಮುನ್ನ ಪರೀಕ್ಷೆಯನ್ನು ಮುಂದೂಡುವುದು ಗೊಂದಲ, ಅನಿಶ್ಚಿತತೆಗೆ ಕಾರಣವಾಗುತ್ತದೆ. ಪರೀಕ್ಷೆಗೆ ಸಿದ್ಧವಾದ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಪರೀಕ್ಷೆ ನಡೆಸುವುದು ಶೈಕ್ಷಣಿಕ ನೀತಿಯ ವಿಷಯವಾಗಿದ್ದು, ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ಗೇಟ್ ಪರೀಕ್ಷೆಗೆ 9 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಸುಮಾರು 20 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಲು ಆನ್ಲೈನ್ ಮೂಲಕ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆ ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವುದರಿಂದ ನಿಗದಿಯಂತೆಯೇ ಪರೀಕ್ಷೆ ನಡೆಯಲಿದೆ.