ಅತ್ಯಾಚಾರ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳಿಗೆ Two Finger Test ನಡೆಸುವ ಕುರಿತಂತೆ ಸುಪ್ರೀಂ ಕೋರ್ಟ್ ಕಿಡಿ ಕಾರಿದೆ. ಅಲ್ಲದೆ ಅವೈಜ್ಞಾನಿಕ ಹಾಗೂ ಕಾನೂನುಬಾಹಿರವಾಗಿರುವ ಇಂತಹ ಪರೀಕ್ಷೆಯನ್ನು ನಡೆಸಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಸೋಮವಾರದಂದು ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜೊತೆಗೆ ಸಂತ್ರಸ್ತೆಯ ಅತ್ಯಾಚಾರಕ್ಕೂ ಹಿಂದಿನ ಲೈಂಗಿಕ ಬದುಕನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ಇಂದಿನ ದಿನಮಾನಗಳಲ್ಲೂ Two Finger Test ನಡೆಸುತ್ತಿರುವುದು ಅಮಾನವೀಯವೆಂದು ತೀರ್ಪಿನಲ್ಲಿ ಹೇಳಲಾಗಿದೆ.
ಜೊತೆಗೆ ಅವೈಜ್ಞಾನಿಕ ಹಾಗೂ ಕಾನೂನುಬಾಹಿರವಾಗಿರುವ ಈ ಪರೀಕ್ಷೆಯನ್ನು ಕೂಡಲೇ ನಿಲ್ಲಿಸಬೇಕೆಂದು ತಾಕೀತು ಮಾಡಿದ್ದು, ವೈದ್ಯಕೀಯ ಕಾಲೇಜಿನ ಪಠ್ಯಗಳಲ್ಲಿ ಇದರ ಉಲ್ಲೇಖವಿದ್ದರೆ ಅದನ್ನು ಸಹ ತೆಗೆದುಹಾಕಬೇಕೆಂದು ಉಚ್ಛ ನ್ಯಾಯಾಲಯ ನಿರ್ದೇಶಿಸಿದೆ. ಯಾರಾದರೂ ಇಂತಹ ಪರೀಕ್ಷೆ ನಡೆಸಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾಯ ಪೀಠ ಎಚ್ಚರಿಕೆ ನೀಡಿದೆ.