
ನವದೆಹಲಿ: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸುಪ್ರೀಂಕೋರ್ಟ್ ರಾಷ್ಟ್ರೀಯ ಕಾರ್ಯಪಡೆ(NTF) ರಚನೆ ಮಾಡಿದೆ.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಆತ್ಮಹತ್ಯೆ ತಡೆಗಾಗಿ ಸೋಮವಾರ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಕಾರ್ಯಪಡೆ ರಚಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪದೇಪದೇ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಐಐಟಿ ದೆಹಲಿಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹದೇವನ್ ಅವರನ್ನು ಒಳಗೊಂಡ ನ್ಯಾಯಪೀಠ ಸೂಚಿಸಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರು ಕಾರ್ಯಪಡೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾಗುವ ಅಂಶಗಳು, ಚಾಲ್ತಿಯಲ್ಲಿರುವ ನಿಯಮ, ಇತರೆ ವಿಚಾರಗಳ ಬಗ್ಗೆ ಕಾರ್ಯಪಡೆ ವರದಿ ನೀಡಲಿದೆ. ವರದಿ ತಯಾರಿಸುವ ಸಂದರ್ಭದಲ್ಲಿ ಕಾರ್ಯಪಡೆ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗೆ ಪರಿಶೀಲನೆಗಾಗಿ ದಿಢೀರ್ ಭೇಟಿ ನೀಡುವ ಅಧಿಕಾರ ಹೊಂದಿರುತ್ತದೆ. ಒಂದು ತಿಂಗಳ ಒಳಗಾಗಿ ಮಧ್ಯಂತರ ವರದಿಯನ್ನು ಕಾರ್ಯಪಡೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.