ಪೋಕ್ಸೋ ಕಾಯಿದೆಯಡಿ ಬಂದಿದ್ದ ಪ್ರಕರಣವೊಂದರಲ್ಲಿ ’ಚರ್ಮಕ್ಕೆ ಚರ್ಮದ ಸ್ಪರ್ಶ’ದ ತೀರ್ಪು ನೀಡಿ ಭಾರೀ ವಿವಾದಕ್ಕೆ ಗುರಿಯಾಗಿದ್ದ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲಾರ ಬಡ್ತಿಯನ್ನು ಸುಪ್ರೀಂ ಕೋರ್ಟ್‌ನ ಕೊಲೇಜಿಯಂ ತಡೆಹಿಡಿದಿದೆ.
ತಾತ್ಕಾಲಿಕವಾಗಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶೆಯಾಗಿರುವ ಪುಷ್ಪಾ, ಈ ತೀರ್ಪಿನ ಪರಿಣಾಮ ಜಿಲ್ಲಾ ನ್ಯಾಯಾಧೀಶೆಯಾಗಿ ಮರಳಲಿದ್ದಾರೆ. ಫೆಬ್ರವರಿ 2022ರಂದು ಪುಷ್ಪಾರ ತಾತ್ಕಾಲಿಕ ನೇಮಕಾತಿ ಅಂತಿಮಗೊಳ್ಳಲಿದೆ.
ಪೋಕ್ಸೋ ಕಾಯಿದೆಯಡಿ ಜನವರಿ 19ರಂದು ನೀಡಿದ ತೀರ್ಪೊಂದರಿಂದ ಪುಷ್ಪಾ ವಿವಾದಕ್ಕೆ ಗುರಿಯಾಗಿದ್ದಾರೆ. 12 ವರ್ಷದ ಬಾಲಕಿಯೊಬ್ಬಳಿಗೆ ಅಸಭ್ಯವಾಗಿ ಮೈಮುಟ್ಟಿದ ಆರೋಪದ ಮೇಲೆ 39 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಪೋಕ್ಸೋ ಕಾಯಿದೆಯಡಿ ಆರೋಪಿ ಎಂದು ಕೆಳಹಂತದ ನ್ಯಾಯಾಲಯವೊಂದು ತೀರ್ಪು ನೀಡಿತ್ತು.
ಸೆಕ್ಷನ್ ತಪ್ಪಾದ ಬಳಕೆ ಕಾರಣಕ್ಕೆ ಎಫ್‌ಐಆರ್ ವಜಾಗೊಳಿಸಲಾಗದು: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ
ಇದಾದ ಬಳಿಕ ಆಪಾದಿತ ಬಾಂಬೆ ಹೈಕೋರ್ಟ್‌ನಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಬಳಿಕ ’ಚರ್ಮಕ್ಕೆ ಚರ್ಮ ಸೋಕದೇ ಇದ್ದ’ ವೇಳೆ ಲೈಂಗಿಕ ಹಲ್ಲೆ ಎನ್ನಲು ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು 39 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ನೀಡಿದ್ದ ಪುಷ್ಪಾ ಭಾರೀ ವಿವಾದಕ್ಕೆ ಗುರಿಯಾಗಿದ್ದರು.
ಪುಷ್ಪಾರ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಹೈಕೋರ್ಟ್ ಕಾನೂನನ್ನು ಅರ್ಥೈಸಿದ ಹಾದಿಯಲ್ಲಿ ಸಾಗಿದರೆ ಸರ್ಜಿಕಲ್ ಗ್ಲೌವ್ಸ್ ಧರಿಸಿ ಅಪ್ರಾಪ್ತರ ಮೇಲೆ ಲೈಂಗಿಕ ಹಲ್ಲೆ ನಡೆಸಿ ಬಚಾವಾಗಬಹುದು ಎಂದಿದ್ದರು.
ಇದರ ಬೆನ್ನಿಗೆ ಗನೇಡಿವಾಲಾರ ತೀರ್ಪನ್ನು ಬದಿಗಿಟ್ಟ ಸುಪ್ರೀಂ ಕೋರ್ಟ್, ಪೋಕ್ಸೋ ಕಾಯಿದೆಯಡಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡುವ ವೇಳೆ ’ಚರ್ಮಕ್ಕೆ ಚರ್ಮ ಸೋಕಿದೆಯೇ ಎನ್ನುವ ಬದಲಿಗೆ ಲೈಂಗಿಕ ಉದ್ದೇಶವನ್ನು’ ಪರಿಗಣಿಸಬೇಕೆಂದು ಹೇಳಿತ್ತು. ನಾಲ್ಕು ವಾರಗಳ ಒಳಗೆ ಶರಣಾಗತನಾಗಿ, ಪೋಕ್ಸೋ ಕಾಯಿದೆಯಡಿ ನೀಡಲಾದ ಶಿಕ್ಷೆ ಅನುಭವಿಸುವಂತೆ ಸುಪ್ರೀಂ ಕೋರ್ಟ್ 39 ವರ್ಷದ ಆರೋಪಿಗೆ ಆದೇಶಿಸಿತ್ತು.