ಕೋವಿಡ್-19ನಿಂದ ಉಂಟಾದ ಸಾವುಗಳಿಗೆ ಎಕ್ಸ್-ಗ್ರೇಷಿಯಾ ಪರಿಹಾರ ನೀಡುವುದನ್ನು ಬಾಕಿ ಇಟ್ಟುಕೊಂಡಿರುವುದನ್ನು ವಾರದ ಒಳಗೆ ಮಾಡಿ ಮುಗಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಗಡುವು ನೀಡಿದೆ.
ಈ ನಿಟ್ಟಿನಲ್ಲಿ ಅರ್ಜಿ ಸ್ವೀಕೃತಿ ಹಾಗೂ ಹಣ ಬಿಡುಗಡೆ ಸಂಬಂಧ ಮಾಹಿತಿ ನೀಡುವಂತೆ ಕರ್ನಾಟಕ, ದೆಹಲಿ ಮತ್ತು ಛತ್ತೀಸ್ಘಡ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಜೂನ್ 30 ಮತ್ತು ಅಕ್ಟೋಬರ್ 4ರಂದು ತಾನು ಹೊರಡಿಸಿದ ಆದೇಶಾನುಸಾರ ಕೋವಿಡ್-19 ಸಾವುಗಳಿಗೆ 50,000 ರೂ.ಗಳ ಪರಿಹಾರ ನೀಡುವ ಪ್ರಕ್ರಿಯೆಗಳ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪರಮೋಚ್ಛ ನ್ಯಾಯಾಲಯ, ಕೆಲವೊಂದು ರಾಜ್ಯಗಳು ಈ ವಿಚಾರದಲ್ಲಿ ಹಿಂದೆ ಬಿದ್ದಿವೆ ಎಂದಿದೆ.
“ನೋಂದಣಿಯಾದ ಮರಣಗಳು, ಅರ್ಜಿಗಳು/ಕ್ಲೇಂಗಳ ಸ್ವೀಕೃತಿ ಹಾಗೂ ಮಾಡಲಾದ ಪಾವತಿಯ ಪ್ರಗತಿಯನ್ನು ಫೈಲ್ ಮಾಡಿ ಕಳುಹಿಸಲು ಕರ್ನಾಟಕ, ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಛತ್ತೀಸ್ಘಡ ಸರ್ಕಾರಗಳ ಕಾರ್ಯದರ್ಶಿಗಳಿಗೆ ನಾವು ನೋಟಿಸ್ ಜಾರಿಗೊಳಿಸಿದ್ದೇವೆ,” ಎಂದು ನ್ಯಾಯಾಧೀಶರಾದ ಎಂಆರ್ ಶಾ ಮತ್ತು ಬಿವಿ ನಾಗರತ್ನ ಇದ್ದ ಕೋರ್ಟ್ನ ಪೀಠ ತಿಳಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಸಿದ್ಧಪಡಿಸಿದ ಪಟ್ಟಿ ಪ್ರಕಾರ; ಕರ್ನಾಟಕದಲ್ಲಿ 38,220 ಸಾವುಗಳಿಗೆ ಪ್ರತಿಯಾಗಿ 7,277 ಕ್ಲೇಂಗಳನ್ನು ಸೆಟಲ್ ಮಾಡಲಾಗಿದೆ. ಮಿಕ್ಕ ರಾಜ್ಯಗಳಲ್ಲೂ ಸಹ ಒಟ್ಟಾರೆ ಸಾವುಗಳು ಹಾಗೂ ಪರಿಹಾರ ಕ್ಲೇಂಗಳ ನಡುವೆ ಭಾರೀ ವ್ಯತ್ಯಾಸವಿದೆ ಎಂದು ಈ ಪಟ್ಟಿಯಿಂದ ತಿಳಿದು ಬಂದಿದೆ.
ಜನವರಿ 12ರೊಳಗೆ ಈ ಸಂಬಂಧ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಕೋರ್ಟ್ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.