ಬೀದರ್: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಡಬ್ಲ್ಯೂ) ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಪರಿಶಿಷ್ಟ ಸಮುದಾಯದ ಕಾರ್ಯಕರ್ತೆ ನೇಮಕವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಭಾಲ್ಕಿ ತಾಲೂಕು ಕೇಂದ್ರದಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕಳೆದ ವರ್ಷ ಅಂಬಿಕಾ ಅವರು ಕಾರ್ಯಕರ್ತೆಯಾಗಿ ನೇಮಕವಾಗಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ. ಸಹಾಯಕಿ ಕೂಡ ಇಲ್ಲದ ಕಾರಣ ಅಂಬಿಕಾ ಅವರೇ ಅಡುಗೆ ತಯಾರಿಸುತ್ತಾರೆ. ಗ್ರಾಮದ ಮಕ್ಕಳ ಮನೆಗೆ ತೆರಳಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವಂತೆ ಮನವಿ ಮಾಡಿದ್ದರೂ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದ್ದರೂ ಮಕ್ಕಳನ್ನು ಕಳುಹಿಸಿಲ್ಲ. ದಾಖಲಾತಿಯಲ್ಲಿ 36 ಮಕ್ಕಳಿದ್ದು ಕೇವಲ ಐದಾರು ಮಕ್ಕಳಷ್ಟೇ ಅಂಗನವಾಡಿಗೆ ಬರುತ್ತಿದ್ದಾರೆ ಎಂದು ಹೇಳಲಾಗಿದೆ.