ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕುಗಳಲ್ಲಿ ಇರುವ ಖಾತೆಗಳನ್ನು ತಕ್ಷಣವೇ ಕ್ಲೋಸ್ ಮಾಡಿ ನಿಶ್ಚಿತ ಠೇವಣಿ ಮತ್ತಿತರ ಹೂಡಿಕೆಗಳನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರದಿಂದ ಎಲ್ಲಾ ಇಲಾಖೆಗಳು, ನಿಗಮ -ಮಂಡಳಿಗಳು, ಅಧೀನ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ.
ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಈ ಕುರಿತಾಗಿ ಆರ್ಥಿಕ ಇಲಾಖೆ ಸೂಚನೆ ನೀಡಿದೆ. ಎಸ್.ಬಿ.ಐ., ಪಿ.ಎನ್.ಬಿ.ಯಲ್ಲಿ ವಿವಿಧ ಮಂಡಳಿಗಳು ಹೂಡಿಕೆ ಮಾಡಿದ್ದು, ಇದರಲ್ಲಿ ವಂಚನೆಯಾಗಿದೆ. ಅವುಗಳನ್ನು ಪರಿಹರಿಸಲು ಬ್ಯಾಂಕುಗಳು ನಿರಾಕರಿಸುತ್ತೇವೆ. ಈ ಪ್ರಕರಣಗಳು ದೀರ್ಘಾವಧಿಯಿಂದ ನ್ಯಾಯಾಲಯದಲ್ಲಿ ಇರುವುದು ಮಹಾಲೇಖಪಾಲರ ವರದಿಯಲ್ಲಿಯೂ ಉಲ್ಲೇಖವಾಗಿದೆ. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆಗಳಲ್ಲಿಯೂ ಈ ವಿಚಾರ ಅನೇಕ ಬಾರಿ ಚರ್ಚೆಗೆ ಬಂದಿದೆ. ಎಸ್.ಬಿ.ಐ., ಪಿ.ಎನ್.ಬಿ.ಯಲ್ಲಿ ವ್ಯವಹಾರ ನಿಲ್ಲಿಸುವಂತೆ ಸಮಿತಿ ಶಿಫಾರಸು ಮಾಡಿತ್ತು ಎಂದು ಹೇಳಲಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ 2011ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ರಾಜಾಜಿನಗರ ಶಾಖೆಯಲ್ಲಿ 25 ಕೋಟಿ ರೂ. ನಿಶ್ಚಿತ ಠೇವಣಿ ಇಟ್ಟಿದ್ದು, ಇದಕ್ಕೆ ಸೇಲಂನ ಶಂಕ್ರೀ ಶಾಖೆಯಿಂದ 12 ಕೋಟಿ ರೂ. ಮತ್ತು 13 ಕೋಟಿ ರೂ. ಎರಡು ಪ್ರತ್ಯೇಕ ರಶೀದಿ ನೀಡಲಾಗಿತ್ತು. ಅವಧಿ ಪೂರ್ಣಗೊಂಡ ನಂತರ 13 ಕೋಟಿ ರೂ. ಮಾತ್ರ ವಾಪಸ್ ಆಗಿದ್ದು, ಬಾಕಿ ಹಣ ಮಂಡಳಿಯ ಖಾತೆಗೆ ಜಮಾ ಆಗಿಲ್ಲ. ಬ್ಯಾಂಕ್ ಅಧಿಕಾರಿಗಳಿಂದ ವಂಚನೆ ನಡೆದಿದೆ ಎನ್ನುವ ಕಾರಣ ನೀಡಿ ಬ್ಯಾಂಕ್ ಹಣ ಪಾವತಿಸುತ್ತಿಲ್ಲ ಎಂದು ಹೇಳಲಾಗಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2013ರಲ್ಲಿ ಎಸ್‌ಬಿಐ ಅವೆನ್ಯೂ ರಸ್ತೆ ಶಾಖೆಯಲ್ಲಿ 10 ಕೋಟಿ ರೂಪಾಯಿ ನಿಶ್ಚಿತ ಠೇವಣಿ ಇಟ್ಟಿದ್ದು, ಬ್ಯಾಂಕ್ ಅಧಿಕಾರಿಗಳು ನಕಲಿ ದಾಖಲಿ ಸೃಷ್ಟಿಸಿ ಆ ಠೇವಣಿ ಹಣವನ್ನು ಕಂಪನಿಯೊಂದರ ಸಾಲಕ್ಕೆ ಹೊಂದಾಣಿಕೆ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಪತ್ರ ವ್ಯವಹಾರ ನಡೆಸಿದ್ದರೂ ಹಣ ಮರುಪಾವತಿಗೆ ಎಸ್‌ಬಿಐ ನಿರಾಕರಿಸಿದೆ. ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ.
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸಿನಂತೆ ಎರಡೂ ಬ್ಯಾಂಕುಗಳಲ್ಲಿರುವ ಖಾತೆ ಸ್ಥಗಿತಗೊಳಿಸಿ ಹೂಡಿಕೆ ಹಿಂಪಡೆಯಬೇಕು. ಮುಂದಿನ ದಿನಗಳಲ್ಲಿ ಈ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿ ಹೂಡಿಕೆ ಮಾಡಬಾರದು ಎಂದು ಸೂಚಿಸಲಾಗಿದೆ.