ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಾ ಹೋದಂತೆಲ್ಲ ಜಗತ್ತಿನಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಗ್ರಾಹಕರು ಸೈಬರ್ಗಳ ಗಾಳಕ್ಕೆ ಬೀಳಬಾರದು ಎಂಬ ಕಾರಣಕ್ಕೆ ಆಯಾ ಬ್ಯಾಂಕ್ಗಳು ಅಲರ್ಟ್ ಸಂದೇಶಗಳನ್ನ ಗ್ರಾಹಕರಿಗೆ ತಲುಪಿಸುತ್ತಲೇ ಇರುತ್ತದೆ. ಒಟಿಪಿಯಂತಹ ಗೌಪ್ಯ ಮಾಹಿತಿಯನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ.
ಇದೀಗ ಚೀನಾ ಮೂಲದ ಹ್ಯಾಕರ್ಗಳು ಎಸ್ಬಿಐ ಗ್ರಾಹಕರ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಎಸ್ಬಿಐ ಗ್ರಾಹಕರ ಬಳಿ ಕೆವೈಸಿ ಕೇಳುವ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ನೀಡಲಾದ ಲಿಂಕ್ನಲ್ಲಿ ಕೆವೈಸಿ ತುಂಬಿ ಎಂದು ಮೋಸ ಮಾಡುವ ಮೂಲಕ ಗ್ರಾಹಕರನ್ನ ಹ್ಯಾಕರ್ಗಳು ಯಾಮಾರಿಸುತ್ತಿದ್ದಾರೆ.
ಥೇಟ್ ಎಸ್ಬಿಐದು ಎಂಬಂತೆ ಕಾಣುವ ಯುಆರ್ಎಲ್ ಗ್ರಾಹಕರಿಗೆ ಕಳುಹಿಸುವ ಮೂಲಕ ಚೀನಾ ಮೂಲದ ಹ್ಯಾಕರ್ಗಳು ಮೋಸದ ಜಾಲವನ್ನ ಎಸೆಯುತ್ತಿದ್ದಾರೆ. https://retail.onlinesbi.com/retail/login.html.
ಇದು ಮಾತ್ರ ಎಸ್ಬಿಐನ ಅಧಿಕೃತ ವೆಬ್ಸೈಟ್ ಆಗಿದೆ. ಒಮ್ಮೆ ನೀವು ಯಾಮಾರಿದಲ್ಲಿ ನಿಮ್ಮ ಖಾತೆಯ ಸಂಪೂರ್ಣ ಹಣ ಹ್ಯಾಕರ್ಗಳ ಕೈ ಸೇರುವ ಸಾಧ್ಯತೆ ಇದೆ. ಹೀಗಾಗಿ ಕಸ್ಟಮರ್ ಕೇರ್ ಎಂದು ಹೇಳಿಕೊಂಡು ಕರೆ ಮಾಡುವವರ ವಿರುದ್ಧ ಆದಷ್ಟು ಎಚ್ಚರವಾಗಿರೋದು ಒಳ್ಳೆಯದು. ಅವರು ಕಳುಹಿಸಿದ ಲಿಂಕ್ಗಳನ್ನ ಓಪನ್ ಮಾಡಿ ನಿಮ್ಮ ಕೆವೈಸಿ ಮಾಹಿತಿ ನೀಡೋದಾಗಲಿ ಅಥವಾ ಒಟಿಪಿ ಶೇರ್ ಮಾಡುವ ಗೋಜಿಗಾಗಲಿ ಹೋಗಲೇಬೇಡಿ. ಅಷ್ಟೊಂದು ಗೊಂದಲ ಎನಿಸಿದಲ್ಲಿ ನೇರವಾಗಿ ಹತ್ತಿರದ ಎಸ್ಬಿಐ ಶಾಖೆಗೆ ಭೇಟಿ ನೀಡಿ ಸಿಬ್ಬಂದಿ ಬಳಿ ಮಾಹಿತಿ ಕೇಳಿಕೊಳ್ಳಿ.