ನೌ ಯುವರ್ ಕಸ್ಟಮರ್ (ಕೆವೈಸಿ) ಹೆಸರಿನಲ್ಲಿ ಎಸ್.ಬಿ.ಐ ಗ್ರಾಹಕರಿಗೆ ಕರೆ ಮಾಡುವುದು, ಎಸ್.ಬಿ.ಐ ಬ್ಯಾಂಕ್ ಹೆಸರಿನಲ್ಲಿ ಲಿಂಕ್ ಕಳುಹಿಸುವ ದೊಡ್ಡ ವಂಚನೆಯ ಜಾಲದ ಬಗ್ಗೆ ಎಸ್.ಬಿ.ಐ ಬ್ಯಾಂಕ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ನಿಮ್ಮ ಕೆವೈಸಿ ಬಾಕಿ ಇದೆ, ಕೂಡಲೇ ಪೂರ್ಣಗೊಳಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ ಎಂಬ ಸಂದೇಶಗಳು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಸ್ವೀಕೃತಿ ಆದಲ್ಲಿ ಜನರು ಎಚ್ಚರ ವಹಿಸಬೇಕು. ಬ್ಯಾಂಕ್‌ಗೆ ಖುದ್ದು ತೆರಳಿ ಈ ಬಗ್ಗೆ ಒಂದೊಮ್ಮೆ ವಿಚಾರಿಸಿದರೆ ಒಳಿತು. ಬಹುತೇಕ ಸಂದರ್ಭಗಳಲ್ಲಿ ಕೆವೈಸಿಯನ್ನು ಬ್ಯಾಂಕಿನೊಳಗೆ ನಿಗದಿತ ಅರ್ಜಿಯಲ್ಲಿ ಮಾಹಿತಿಗಳನ್ನು ತುಂಬುವ ಮೂಲಕವೇ ನೀಡಲಾಗುತ್ತದೆ. ಯಾವುದೇ ಆನ್‌ಲೈನ್ ಲಿಂಕ್, ಒಟಿಪಿಗಳ ಮೂಲಕ ಕೆವೈಸಿಯನ್ನು ಫೋನ್‌ನಲ್ಲಿಯೇ ಪೂರ್ಣ ಮಾಡಲು ಬರುವುದಿಲ್ಲ.
ಯಾರೋ ಕರೆ ಮಾಡಿ, ಎಸ್.ಬಿ.ಐ ಕಸ್ಟಮರ್ ಕೇರ್ ಎಂದು ಹೇಳಿದ ಕೂಡಲೇ ನಂಬಿಕೊಂಡು ಅವರು ಕೇಳಿದ ಮಾಹಿತಿಯನ್ನೆಲ್ಲ ಕೊಟ್ಟು ಬಿಡಬೇಡಿರಿ. ಸಮೀಪದ ಎಸ್.ಬಿ.ಐ ಬ್ಯಾಂಕ್‌ಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಿಕೊಳ್ಳುತ್ತೇನೆ ಎಂದು ಕರೆ ಮಾಡಿದವರಿಗೆ ತಿಳಿಸಿ, ಕರೆಯನ್ನು ಕಟ್ ಮಾಡಿಬಿಡಿ. ಕರೆ ಮಾಡಿದವರ ಒತ್ತಾಯಕ್ಕೆ ಮಣಿದು ನಿಮ್ಮ ಸ್ಮಾರ್ಟ್‌ಫೋನ್‌ಗೆ ಎಸ್.ಬಿ.ಐ ಅಥವಾ ಇತರ ಯಾವುದೇ ಹೆಸರಿನ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿರಿ.
ಯಾವುದೇ ಕಾರಣಕ್ಕೂ ಕರೆ ಮಾಡಿದವರಿಗೆ ಅಥವಾ ಎಸ್‌ಎಂಎಸ್ ಮೂಲಕ ಸಂಪರ್ಕಿಸುವವರಿಗೆ ಕೆವೈಸಿ ಹೆಸರಿನಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆ, ಪಿನ್ ಕೋಡ್ ಮತ್ತು ಸಿವಿವಿ ಸಂಖ್ಯೆಗಳನ್ನು ತಿಳಿಸಬೇಡಿರಿ. ಇವೆಲ್ಲ ನಿಮ್ಮ ಖಾಸಗಿ ಸಂಖ್ಯೆಗಳಾಗಿದ್ದು, ಯಾವುದೇ ಸಂದರ್ಭಗಳಲ್ಲೂ ಬ್ಯಾಂಕ್ ಈ ಮಾಹಿತಿಯನ್ನು ಕೇಳುವುದಿಲ್ಲ. ಇಂಟರ್‌ನೆಟ್ ಬ್ಯಾಂಕಿಂಗ್ ಬಳಸುವ ವೇಳೆ ಸಿಕ್ಕ ಸಿಕ್ಕ ಲಿಂಕ್‌ಗಳನ್ನು ಒತ್ತುವುದು ಹ್ಯಾಕರ್‌ಗಳ ವೆಬ್‌ಸೈಟ್‌ಗೆ ನಿಮ್ಮನ್ನು ಕೊಂಡೊಯ್ಯಬಹುದು ಎಂದು ಬ್ಯಾಂಕ್ ಎಚ್ಚರಿಕೆಯ ಅಂಶಗಳು ತಿಳಿಸಿದೆ.