ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಸಾಲದ ಮೇಲೆ ವಿಶೇಷ ಕೊಡುಗೆ ನೀಡಲಿದೆ. 44 ಕೋಟಿ ಗ್ರಾಹಕರಿಗೆ ಬ್ಯಾಂಕ್ ಒಳ್ಳೆ ಸುದ್ದಿ ನೀಡಿದೆ. ಬ್ಯಾಂಕ್, ತನ್ನ ಗ್ರಾಹಕರಿಗೆ ಕಾರು, ವೈಯಕ್ತಿಕ, ಪಿಂಚಣಿ ಮತ್ತು ಚಿನ್ನದ ಸಾಲಗಳ ಸಂಸ್ಕರಣಾ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಿದೆ.
ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಎಸ್‌ಬಿಐ ಗ್ರಾಹಕರಿಗೆ ಈ ವಿಶೇಷ ಕೊಡುಗೆ ನೀಡಿದೆ. ಪ್ರಕ್ರಿಯೆ ಶುಲ್ಕ ವಿನಾಯಿತಿ ಜೊತೆಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವುದಾಗಿ ಬ್ಯಾಂಕ್ ಘೋಷಿಸಿದೆ.
ಗೃಹ ಸಾಲದ ನಂತರ, ಎಸ್‌ಬಿಐ ಈಗ ಕಾರು ಸಾಲ ಪಡೆಯುವ ಗ್ರಾಹಕರಿಗೆ ಶೇಕಡಾ 100ರಷ್ಟು ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಗ್ರಾಹಕರಿಗೆ ಕಾರು ಸಾಲದ ಮೇಲೆ ಶೇಕಡಾ 90 ವರೆಗೆ ಆನ್-ರೋಡ್ ಹಣಕಾಸು ಸೌಲಭ್ಯವನ್ನು ಒದಗಿಸಲಿದೆ. ಎಸ್‌ಬಿಐನ ಯೊನೊ ಆಪ್‌ನಿಂದ ಕಾರಿನ ಸಾಲಕ್ಕೆ ಅರ್ಜಿ ಸಲ್ಲಿಸಿದ್ರೆ ಬಡ್ಡಿ ದರಗಳಲ್ಲಿ ಶೇಕಡಾ 0.25 ರಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಯೋನೊ ಆಪ್ಲಿಕೇಷನ್ ನಿಂದ ಕಾರಿನ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಶೇಕಡಾ 7.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಗ್ರಾಹಕರು ಯಾವುದೇ ವಿಧಾನದ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿದ್ರೂ ಸಂಸ್ಕರಣಾ ಶುಲ್ಕದಲ್ಲಿ ಶೇಕಡಾ 100ರಷ್ಟು ರಿಯಾಯಿತಿ ಸಿಗಲಿದೆ. ಯೊನೊ ಅಪ್ಲಿಕೇಷನ್ ಮೂಲಕ ಅಥವಾ ಶಾಖೆಗೆ ಭೇಟಿ ನೀಡುವ ಮೂಲಕ ಪಿಂಚಣಿ ಸಾಲಕ್ಕೆ ಅರ್ಜಿ ಹಾಕಿದರೂ, ಗ್ರಾಹಕರು ಶೂನ್ಯ ಸಂಸ್ಕರಣಾ ಶುಲ್ಕದ ಲಾಭ ಪಡೆಯಲಿದ್ದಾರೆ. ಕೊರೊನಾ ವಾರಿಯರ್ಸ್ ಗೆ ಬಡ್ಡಿ ದರದಲ್ಲಿ ಶೇಕಡಾ 0.50 ಹೆಚ್ಚುವರಿ ರಿಯಾಯಿತಿಯನ್ನು ಬ್ಯಾಂಕ್ ಘೋಷಿಸಿದೆ.
ಶೀಘ್ರದಲ್ಲೇ ಕಾರು ಮತ್ತು ಚಿನ್ನದ ಸಾಲಗಳ ಮೇಲೆ ಈ ರಿಯಾಯಿತಿ ಸಿಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಮೃತ್ ಮಹೋತ್ಸವದ ಅಡಿಯಲ್ಲಿ ಚಿನ್ನದ ಸಾಲವನ್ನು ತೆಗೆದುಕೊಳ್ಳುವ ಗ್ರಾಹಕರಿಗೆ ಬಡ್ಡಿ ದರದಲ್ಲಿ ಶೇಕಡಾ 0.75 ರಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಯೊನೊ ಆಪ್‌ನಿಂದ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಸಂಪೂರ್ಣ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗುವುದು.