ಕೊರೊನಾ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅನೇಕ ಬ್ಯಾಂಕುಗಳು ಮನೆ-ಮನೆಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತಿವೆ. ಜನರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕ್ ಗಳು ಈ ಸೇವೆಯನ್ನು ಶುರು ಮಾಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರ ಮನೆ ಬಾಗಿಲಿಗೆ, ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಪಿಕ್ ಅಪ್ ಸೇವೆಗಳು, ವಿತರಣಾ ಸೇವೆಗಳು ಮತ್ತು ಇತರ ಸೇವೆಗಳನ್ನು ಒಳಗೊಂಡಂತೆ ಬ್ಯಾಂಕ್ ಮೂರು ರೀತಿಯ ಸೇವೆಗಳನ್ನು ಒದಗಿಸುತ್ತಿದೆ.
ಪಿಕಪ್ ಸೇವೆಗಳಲ್ಲಿ, ಚೆಕ್, ಡ್ರಾಫ್ಟ್, ಪೇ ಆರ್ಡರ್, ಹೊಸ ಚೆಕ್ ಬುಕ್, ಡಿಮ್ಯಾಂಡ್ ಸ್ಲಿಪ್, ಐಟಿ ಚಲನ್ ಸೇರಿವೆ. ವಿತರಣಾ ಸೇವೆಗಳಲ್ಲಿ, ಡ್ರಾಫ್ಟ್, ಪೇ ಆರ್ಡರ್, ಸ್ಥಿರ ಠೇವಣಿ ರಶೀದಿಗಳು, ಖಾತೆಯ ವಿವರ, ಟಿಡಿಎಸ್, ಫಾರ್ಮ್ -16 ಪ್ರಮಾಣ ಪತ್ರಗಳು ಸೇರಿವೆ. ಇತರ ಸೇವೆಗಳಲ್ಲಿ ನಗದು ಹಿಂಪಡೆಯುವಿಕೆ ಮತ್ತು ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಪ್ರಮಾಣಪತ್ರ ಸೌಲಭ್ಯ ಸಿಗಲಿದೆ.
ಡೋರ್ ಸ್ಟೆಪ್ ಬ್ಯಾಂಕಿಂಗ್ ಸರ್ವಿಸ್ ಪಡೆಯಲು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಹೆಸರು ನೋಂದಾಯಿಸಬೇಕು. ನಿಮ್ಮ ಖಾತೆ ಹೊಂದಿರುವ ಶಾಖೆಯಿಂದ ಮಾತ್ರ ಈ ಸೌಲಭ್ಯ ಪಡೆಯಲು ಸಾಧ್ಯ. ನಗದು ಹಿಂಪಡೆಯುವಿಕೆ ಮತ್ತು ನಗದು ಠೇವಣಿ ಮಿತಿ ಪ್ರತಿ ದಿನ 20,000 ರೂಪಾಯಿ ನಿಗಧಿಪಡಿಸಲಾಗಿದೆ. ಇದಕ್ಕೆ ಸೇವಾ ಶುಲ್ಕ ಭರಿಸಬೇಕು. ಹಣಕಾಸೇತರ ವಹಿವಾಟಿಗೆ 60 ರೂಪಾಯಿ ಜೊತೆ ಜಿಎಸ್ಟಿ ಪಾವತಿ ಮಾಡಬೇಕು. ಹಣಕಾಸಿನ ವಹಿವಾಟಿಗೆ 100 ರೂಪಾಯಿ ಜೊತೆ ಜಿಎಸ್ಟಿ ವಿಧಿಸಲಾಗುತ್ತದೆ.
ದೃಷ್ಟಿಹೀನ ವ್ಯಕ್ತಿಗಳು, ವಿಕಲಚೇತನರು ಸೇರಿದಂತೆ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಈ ಸೇವೆ ಪಡೆಯಬಹುದು. ಕೆವೈಸಿ ಪೂರ್ಣಗೊಳಿಸಿರುವ ಖಾತೆದಾರರಿಗೆ ಇದು ಲಭ್ಯವಾಗಲಿದೆ. ಮೊಬೈಲ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಿರಬೇಕು. ಜಂಟಿ ಖಾತೆಗಳು, ಸಣ್ಣ ಖಾತೆಗಳು, ಶಾಖೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಇರುವ ಗ್ರಾಹಕರಿಗೆ ಈ ಸೌಲಭ್ಯ ಲಭ್ಯವಿಲ್ಲ.
ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲೇ ಸ್ಟೋರ್ ನಿಂದ ಡೋರ್ ಸ್ಟೆಪ್ ಬ್ಯಾಂಕಿಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ನೋಂದಾಯಿಸಲು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಮೊಬೈಲ್ ಗೆ ಬರುವ ಒಟಿಪಿಯನ್ನು ನಮೂದಿಸಬೇಕು. ದೃಢೀಕರಣದ ನಂತರ ಹೆಸರು ಮತ್ತು ಇಮೇಲ್, ಪಾಸ್ವರ್ಡ್ ಒದಗಿಸಬೇಕು. ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಬೇಕು. ನಂತ್ರ ನಿಮಗೆ ಎಸ್ಎಂಎಸ್ ಬರಲಿದೆ. ಹೆಚ್ಚುವರಿ ಮಾಹಿತಿಯನ್ನು ನಮೂದಿಸಲು ಪಿನ್‌ನೊಂದಿಗೆ ಅಪ್ಲಿಕೇಷನ್ ಗೆ ಲಾಗಿನ್ ಆಗಬೇಕು. ವಿಳಾಸದ ಆಯ್ಕೆ ಆರಿಸಿ ಅಲ್ಲಿ ವಿಳಾಸ ನಮೂದಿಸಬೇಕು. ಎಸ್‌ಬಿಐ ಡೋರ್ ಸ್ಟೆಪ್ಸ್ ಬ್ಯಾಂಕಿಂಗ್ ಸೇವೆಗಳನ್ನು ಮೊಬೈಲ್ ಅಪ್ಲಿಕೇಶನ್, ವೆಬ್ ಪೋರ್ಟಲ್ ಮತ್ತು ಕಾಲ್ ಸೆಂಟರ್ ಮೂಲಕ ಪಡೆಯಬಹುದು.