ಬ್ಯಾಂಕಿಂಗ್ ವ್ಯವಹಾರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದಂತೆಯೇ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಅಂಶವನ್ನ ಗಮನದಲ್ಲಿಟ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ನೀವು ವೈಯಕ್ತಿಕ ಇಲ್ಲವೇ ಆರ್ಥಿಕ ದಾಖಲೆಗಳನ್ನ ಕಳೆದುಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದೆ. ಅಲ್ಲದೇ ಆನ್ಲೈನ್ ವಂಚನೆಯಿಂದ ಪಾರಾಗಲು ಯಾವೆಲ್ಲ ಎಚ್ಚರಿಕೆ ಕ್ರಮಗಳನ್ನ ಕೈಗೊಳ್ಳಬೇಕು ಅನ್ನೋದಕ್ಕೂ ಮಾಹಿತಿ ನೀಡಿದೆ.
ಅಧಿಕೃತ ಮೂಲಗಳಿಂದ ಮಾತ್ರ ಅಪ್ಲಿಕೇಶನ್ಗಳನ್ನ ಡೌನ್ಲೋಡ್ ಮಾಡಿ. ಯಾರೋ ಹೇಳಿದರು ಎಂಬ ಮಾತ್ರಕ್ಕೆ ಸಿಕ್ಕ ಸಿಕ್ಕ ಅಪ್ಲಿಕೇಶನ್ಗಳನ್ನ ಡೌನ್ಲೋಡ್ ಮಾಡಬೇಡಿ. ಈ ರೀತಿ ಮಾಡೋದ್ರಿಂದ ನಿಮಗೆ ಬರುವ ಒಟಿಪಿ, ಪಿನ್ ಅಥವಾ ಸಿವಿವಿಗಳ ಮೇಲೆ ಸೈಬರ್ ಅಪರಾಧಿಗಳು ಕಣ್ಣಿಡುವ ಸಾಧ್ಯತೆಯನ್ನ ತಪ್ಪಿಸಬಹುದಾಗಿದೆ.
ಕಳೆದ ವಾರವಷ್ಟೇ ಚೀನಾ ಮೂಲದ ಹ್ಯಾಕರ್ಗಳು ಎಸ್ಬಿಐ ಗ್ರಾಹಕರ ಮೇಲೆ ಕಣ್ಣಿಟ್ಟಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. 50 ಲಕ್ಷ ರೂಪಾಯಿ ಬಹುಮಾನ ಕಾದಿದೆ ಎಂದು ಗ್ರಾಹಕರನ್ನ ನಂಬಿಸುವ ವಂಚಕರು ಅವರಿಂದ ಕೆವೈಸಿ ಮಾಹಿತಿಯನ್ನ ಪಡೆದು ಬಳಿಕ ಖಾತೆಯಲ್ಲಿನ ಹಣವನ್ನ ಮಂಗಮಾಯ ಮಾಡುವ ಜಾಲ ಇದಾಗಿದೆ.
ಅಲ್ಲದೇ ಕಳೆದ ಮಾರ್ಚ್ನಲ್ಲಿ 9870 ರೂಪಾಯಿ ಕ್ರೆಡಿಟ್ ಪಾಯಿಂಟ್ ಪಡೆದುಕೊಳ್ಳಿ ಎಂಬ ಸಂದೇಶದೊಂದಿಗೆ ಎಸ್ಬಿಐ ಗ್ರಾಹಕರನ್ನ ವಂಚಿಸುವ ಜಾಲ ಕೂಡ ಬೆಳಕಿಗೆ ಬಂದಿತ್ತು.