
ದಾವಣಗೆರೆ: ದಾವಣಗೆರೆ ಜಿಲ್ಲೆ ನ್ಯಾಮತಿ ಎಸ್.ಬಿ.ಐ. ಶಾಖೆಗೆ ಕನ್ನ ಹಾಕಿದ ಕಳ್ಳರು ಲಾಕರ್ ನಲ್ಲಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಸಿಸಿಟಿವಿ ಕ್ಯಾಮರಾದ ಡಿವಿಆರ್ ಅನ್ನೂ ಹೊತ್ತುಕೊಂಡು ಹೋಗಿದ್ದಾರೆ.
ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಎಸ್.ಬಿ.ಐ. ಬ್ಯಾಂಕ್ ನಲ್ಲಿ ಘಟನೆ ನಡೆದಿದೆ. ಶನಿವಾರ, ಭಾನುವಾರ ಬ್ಯಾಂಕಿಗೆ ರಜೆ ಇದ್ದ ಕಾರಣ ಕಳವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಟ್ಟಡದ ಒಂದು ಬದಿಯ ಕಿಟಕಿ ಸರಳುಗಳನ್ನು ಗ್ಯಾಸ್ ಕಟರ್ ನಿಂದ ತುಂಡರಿಸಿ ಒಳ ನುಗ್ಗಿದ ಕಳ್ಳರು ಲಾಕರ್ ನಲ್ಲಿದ್ದ ನಗದು, ಚಿನ್ನಾಭರಣ ಕದ್ದು ಸಿಸಿಟಿವಿ ವೈಯರ್ ಕಿತ್ತು ಹಾಕಿ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಸಿಬ್ಬಂದಿ ಬ್ಯಾಂಕಿನ ಕೆಲಸಕ್ಕೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನ್ಯಾಮತಿ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳ ತಂಡ ಪರಿಶೀಲನೆ ನಡೆಸಿದ್ದಾರೆ.