ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ-2020 ರದ್ದು ಮಾಡಲಾಗಿದೆ. ಅರ್ಜಿ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ.
ಎಸ್ಬಿಐ ಅಪ್ರೆಂಟಿಸ್ ನೇಮಕಾತಿ 2021 ರ ಆನ್ಲೈನ್ ನೋಂದಣಿ ಪ್ರಕ್ರಿಯೆ ಜುಲೈ 6 ಮಂಗಳವಾರದಿಂದ ಆರಂಭವಾಗಿದೆ. ಎಸ್.ಬಿ.ಐ. ಒಂದು ವರ್ಷದ ಅವಧಿಗೆ 6100 ಅಂಪ್ರೆಟಿಸ್ ಗಳಿಗೆ ತರಬೇತಿ ನೀಡಲಿದೆ. ಅಪ್ರೆಂಟಿಸ್ ಎಸ್.ಬಿ.ಐ. ಉದ್ಯೋಗಿಯಾಗಿದ್ದರೂ ಅವರು ಮಾಸಿಕ 15000 ರೂ. ಸ್ಟೈಫಂಡ್ ಪಡೆಯುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು sbi.co.in ಆನ್ಲೈನ್ ನಲ್ಲಿ ಜುಲೈ 26 ರೊಳಗೆ ಅರ್ಜಿ ಸಲ್ಲಿಸಬಹುದು.
ಎಸ್‌ಬಿಐ ಅಪ್ರೆಂಟಿಸ್ ನೇಮಕಾತಿ 2020 ರದ್ದು:
ಈ ಮೊದಲು, 2020 ರ ನವೆಂಬರ್ 20 ರಂದು ಎಸ್‌ಬಿಐ ಅಪ್ರೆಂಟಿಸ್ ನೇಮಕಾತಿ ಪ್ರಕ್ರಿಯೆಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಆದಾಗ್ಯೂ, ಜುಲೈ 6 ರ ಮಂಗಳವಾರ ಎಸ್‌ಬಿಐ ಅಪ್ರೆಂಟಿಸ್ ನೇಮಕಾತಿ ಪ್ರಕ್ರಿಯೆ 2020 ಅನ್ನು ಬ್ಯಾಂಕ್ ರದ್ದುಗೊಳಿಸಿದೆ. ‘ಅಪ್ರೆಂಟಿಸ್ ಆಕ್ಟ್, 1961 ರ ಅಡಿಯಲ್ಲಿ ಅಪ್ರೆಂಟಿಸ್‌ಗಳ ಪ್ರಕ್ರಿಯೆಯ 20.11.2020 ರ ಜಾಹೀರಾತು ಸಂಖ್ಯೆ ಸಿಆರ್‌ಪಿಡಿ / ಎಪಿಪಿಆರ್ / 2020-21 / 07 ರದ್ದು ಮಾಡಲಾಗಿದೆ’ ಎಂದು ಹೇಳಲಾಗಿದೆ. ಅರ್ಜಿ ಸಲ್ಲಿಸಿದ ಮತ್ತು ಶುಲ್ಕವನ್ನು ಪಾವತಿಸಿದ ಎಲ್ಲ ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಗುವುದು.
ಎಸ್‌ಬಿಐ ಅಪ್ರೆಂಟಿಸ್ ನೇಮಕಾತಿ 2021:
6100 ಹುದ್ದೆಗಳನ್ನು ಭರ್ತಿ ಮಾಡಲು ಬ್ಯಾಂಕ್ ನೇಮಕಾತಿ ಚಾಲನೆ ನೀಡಿದ್ದು, ಇವುಗಳಲ್ಲಿ 2577 ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಒಬಿಸಿಗೆ 1375, ಎಸ್‌ಸಿಗೆ 977, ಇಡಬ್ಲ್ಯೂಎಸ್‌ಗೆ 604 ಮತ್ತು ಎಸ್‌ಟಿಗೆ 567 ಹುದ್ದೆಗಳಿವೆ.
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿವಿಯಿಂದ ಪದವಿ ಪೂರ್ಣಗೊಳಿಸಿರಬೇಕು. ಕನಿಷ್ಠ ವಯಸ್ಸಿನ ಮಿತಿ 20 ವರ್ಷಗಳು. ಅಕ್ಟೋಬರ್ 31, 2020 ರ ವೇಳೆಗೆ ಅಭ್ಯರ್ಥಿ 28 ವರ್ಷ ಮೀರಬಾರದು.
ಜನರಲ್ /ಒಬಿಸಿ /ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ. ಎಸ್‌ಸಿ /ಎಸ್‌ಟಿ /ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ.