ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಮಾರ್ಚ್31, 2022 ರ ಮೊದಲು ಪಾನ್-ಆಧಾರ್ ಕಾರ್ಡ್ ಲಿಂಕ್ ಮಾಡಲು ಬ್ಯಾಂಕ್ ತನ್ನ ಖಾತೆದಾರರಿಗೆ ಸೂಚನೆ ನೀಡಿದೆ. ಒಂದು ವೇಳೆ ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಯಿರುತ್ತದೆ ಎಂದು ಎಸ್ಬಿಐ ಹೇಳಿದೆ.
ಎಸ್ಬಿಐ ಈ ಬಗ್ಗೆ ಟ್ವೀಟ್ ಮಾಡಿ ಗ್ರಾಹಕರಿಗೆ ಮಾಹಿತಿ ನೀಡಿದೆ. ಅನಾನುಕೂಲತೆ ತಪ್ಪಿಸಲು ಮತ್ತು ತೊಂದರೆಯಿಲ್ಲದೆ ಬ್ಯಾಂಕಿಂಗ್ ಸೇವೆ ಆನಂದಿಸಲು ನಮ್ಮ ಗ್ರಾಹಕರಿಗೆ ಪಾನ್-ಆಧಾರ್ ಲಿಂಕ್ ಮಾಡಲು ಬ್ಯಾಂಕ್ ಸಲಹೆ ನೀಡಿದೆ. ಆಧಾರ್ ಜೊತೆ ಪಾನ್ ಲಿಂಕ್ ಕಡ್ಡಾಯ ಎಂದು ಬ್ಯಾಂಕ್ ಹೇಳಿದೆ. ಪಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ಪಾನ್ ನಿಷ್ಕ್ರಿಯವಾಗುತ್ತದೆ. ನಿರ್ದಿಷ್ಟ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುವುದಿಲ್ಲವೆಂದು ಬ್ಯಾಂಕ್ ಹೇಳಿದೆ.
ಕೊರೊನಾ ಹಿನ್ನಲೆಯಲ್ಲಿ ಆಧಾರ್- ಪಾನ್ ಲಿಂಕ್ ಗಡುವನ್ನು ಸೆಪ್ಟೆಂಬರ್ 30, 2021 ರಿಂದ ಮಾರ್ಚ್ 31, 2022 ರವರೆಗೆ ವಿಸ್ತರಿಸಲಾಗಿದೆ.
ಪಾನ್ ಜೊತೆ ಆಧಾರ್ ಲಿಂಕ್ ಮಾಡುವುದು ಸುಲಭ. ಮೊದಲು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್ https://www.incometaxindiaefiling.gov.in/home ಗೆ ಹೋಗಬೇಕು. ಅಲ್ಲಿ ಎಡಭಾಗದಲ್ಲಿ ಲಿಂಕ್ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಹೊಸ ಪುಟ ತೆರೆಯುತ್ತದೆ. ಅಲ್ಲಿ ಪಾನ್ ಆಧಾರ್ ಮತ್ತು ಆಧಾರ್‌ನಲ್ಲಿ ನಮೂದಿಸಿರುವಂತೆ ಹೆಸರನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್‌ನಲ್ಲಿ ಕೇವಲ ಜನನ ದಾಖಲೆ ಮಾತ್ರವಿದ್ದಲ್ಲಿ ಆಧಾರ್ ಕಾರ್ಡ್‌ನಲ್ಲಿ ನನ್ನ ಜನ್ಮ ವರ್ಷ ಮಾತ್ರ ಇದೆ ಎಂಬ ಬಾಕ್ಸ್ ಟಿಕ್ ಮಾಡಬೇಕು. ಕ್ಯಾಪ್ಚಾ ಕೋಡ್ ನಮೂದಿಸಿ ಅಥವಾ ಒಟಿಪಿ ಆಯ್ಕೆ ಮಾಡಿ. ಲಿಂಕ್ ಆಧಾರ್ ಬಟನ್ ಕ್ಲಿಕ್ ಮಾಡಿ. ಆಗ ಪಾನ್ ಮತ್ತು ಆಧಾರ್ ಲಿಂಕ್ ಆಗುತ್ತದೆ.
ಎಸ್‌ಎಂಎಸ್ ಮೂಲಕವೂ ಪಾನ್ ಮತ್ತು ಆಧಾರ್ ಲಿಂಕ್ ಮಾಡಬಹುದು. ಮೊಬೈಲ್‌ನ ಸಂದೇಶ ಬಾಕ್ಸ್ ನಲ್ಲಿ UIDPAN<12-ಅಂಕಿಯ ಆಧಾರ್>10-ಅಂಕಿಯ PAN> ಟೈಪ್ ಮಾಡಬೇಕು. ಇದನ್ನು 567678 ಅಥವಾ 56161 ಗೆ ಕಳುಹಿಸಬೇಕು.