ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ನಿಮಗಾಗಿ ವಿಶೇಷ ಎಚ್ಚರಿಕೆಯ ಸಂದೇಶವಿದೆ. ನಿಮ್ಮ ಅಕೌಂಟ್ ಬ್ಲಾಕ್ ಆಗಿದೆ, ಅದನ್ನು ಸರಿಪಡಿಸಲು ಪಾನ್ ನಂಬರ್ ಅಪ್ಡೇಟ್ ಮಾಡಿ ಅಂತಾ ಯಾವುದಾದರೂ ಮೆಸೇಜ್ ಅಥವಾ ಕರೆ ಬಂದರೆ ಅಪ್ಪಿತಪ್ಪಿಯೂ ಹಾಗೆ ಮಾಡಬೇಡಿ. ಅದೊಂದು ಮೋಸದ ಜಾಲ.
ನಿಮ್ಮ ಯೋನೋ ಖಾತೆ ಕ್ಲೋಸ್ ಆಗಿದೆ ಅದನ್ನು ಮರುಸಕ್ರಿಯಗೊಳಿಸಲು ನಿಮ್ಮ ಪಾನ್ ನಂಬರ್ ಅಪ್ಡೇಟ್ ಮಾಡಿ ಅಂತಾ ಹಲವರಿಗೆ ಈಗಾಗ್ಲೇ ಮೆಸೇಜ್ ಮತ್ತು ಕರೆಗಳು ಬಂದಿವೆ. ಇದಕ್ಕಾಗಿಯೇ ವಂಚಕರು ಲಿಂಕ್ ಒಂದನ್ನು ಸಹ ಕಳಿಸಿರ್ತಾರೆ. ಅವರು ಹೇಳಿದಂತೆ ಅಪ್ಡೇಟ್ ಮಾಡಲು ಹೋದ್ರೆ ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ವಂಚಕರ ಕೈಸೇರುತ್ತದೆ.
ಇದೊಂದು ಫೇಕ್ ಮೆಸೇಜ್. ಯಾವುದೇ ಕಾರಣಕ್ಕೂ ಇದಕ್ಕೆ ಪ್ರತಿಕ್ರಿಯಿಸಬೇಡಿ ಅಂತಾ ಸರ್ಕಾರದ ಫ್ಯಾಕ್ಟ್ ಚೆಕರ್, ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ. ಎಸ್‌ಬಿಐ ಯಾವುದೇ ಗ್ರಾಹಕರ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ ಅಂತಾ ಸ್ಪಷ್ಟಪಡಿಸಿದೆ. ಯಾವುದೇ ಅನುಮಾನಗಳಿದ್ದಲ್ಲಿ ಪಿಐಬಿ ವೆಬ್‌ಸೈಟ್ ಮೂಲಕ ಸಂಪರ್ಕಿಸಬಹುದು, ಅಥವಾ 1930 ಸಹಾಯವಾಣಿಗೆ ಗ್ರಾಹಕರು ಕರೆ ಮಾಡಬಹುದು.
ಆರ್‌ಬಿಐ ಅಂಕಿ ಅಂಶಗಳ ಪ್ರಕಾರ 2021-22ರಲ್ಲಿ ಬ್ಯಾಂಕ್ ಗ್ರಾಹಕರು ಇಂತಹ ವಂಚನೆಗಳಿಂದ ಸುಮಾರು 179 ಕೋಟಿ ರೂಪಾಯಿ ಹಣವನ್ನ ಕಳೆದುಕೊಂಡಿದ್ದಾರೆ. 2020-21ರಲ್ಲಿ ಸುಮಾರು 216 ಕೋಟಿ ರೂಪಾಯಿ ಮೋಸಗಾರರ ಪಾಲಾಗಿತ್ತು. ಇಂತಹ ಸೈಬರ್ ಕ್ರೈಮ್‌ನಿಂದ ಪಾರಾಗಲು ಎಸ್‌ಬಿಐ ಕೆಲವೊಂದು ನಿರ್ದೇಶನಗಳನ್ನು ಸಹ ನೀಡಿದೆ.
ಆನ್‌ಲೈನ್ ಪೇಮೆಂಟ್ ಮಾಡುವಾಗ ಮಾತ್ರ ಗ್ರಾಹಕರು ಯುಪಿಐ ಪಿನ್ ಅನ್ನು ನಮೂದಿಸಬೇಕು.
ಯುಪಿಐ ಪಿನ್ ಹಣವನ್ನು ವರ್ಗಾಯಿಸುವಾಗ ಮಾತ್ರ ಅವಶ್ಯಕ, ರಿಸೀವ್ ಮಾಡಲು ಬೇಕಾಗಿಲ್ಲ.
ಯಾರೊಂದಿಗೂ ಯುಪಿಐ ಪಿನ್ ಶೇರ್ ಮಾಡಬೇಡಿ.
ಪೇಮೆಂಟ್ ಅಥವಾ ಇತರ ತೊಂದರೆ ಕಂಡುಬಂದಲ್ಲಿ ಎಸ್‌ಬಿಐ ಅಪ್ಲಿಕೇಶನ್‌ನ ಹೆಲ್ಪ್ ಸೆಕ್ಷನ್‌ನ ಸಹಾಯ ಪಡೆಯಿರಿ.