ಹೋಳಿ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಹೋಳಿ ಹಬ್ಬಕ್ಕೆ ಬಣ್ಣಗಳ ಖರೀದಿ ಮಾಡಲಾಗ್ತಿದೆ. ಬಣ್ಣದೋಕುಳಿಯಲ್ಲಿ ಮಿಂದೇಳುವ ಜನರಿಗೆ ಹಬ್ಬದ ನಂತ್ರ ಬಣ್ಣ ತೆಗೆಯೋದು ಒಂದು ದೊಡ್ಡ ಕೆಲಸವಾಗುತ್ತದೆ. ಇದೇ ಕಾರಣಕ್ಕೆ ಅನೇಕರು ಬಣ್ಣದಿಂದ ದೂರ ಇರ್ತಾರೆ. ಚರ್ಮಕ್ಕೆ ಅಂಟಿಕೊಳ್ಳುವ ಕೆಲವೊಂದು ಬಣ್ಣ ಸುಲಭವಾಗಿ ಹೋದ್ರೆ ಮತ್ತೆ ಕೆಲವು ಬಣ್ಣ 2-3 ದಿನ ಕಾಡುತ್ತದೆ. ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಚರ್ಮಕ್ಕೆ ಹಾನಿಯಾಗದಂತೆ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.
ಕಡಲೆ ಹಿಟ್ಟು : ಸ್ವಲ್ಪ ಕಡಲೆ ಹಿಟ್ಟಿಗೆ ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವನ್ನು ಬಣ್ಣವಿರುವ ಜಾಗಕ್ಕೆ ಹಚ್ಚಿಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಕೆಲವೇ ನಿಮಿಷದಲ್ಲಿ ಚರ್ಮಕ್ಕೆ ಅಂಟಿದ ಬಣ್ಣ ಮಾಯವಾಗುತ್ತದೆ. ಚರ್ಮ ಕೂಡ ಮೃದುವಾಗುತ್ತದೆ.
ಸೌತೆಕಾಯಿ ರಸ : ಸೌತೆಕಾಯಿ ರಸವನ್ನು ತೆಗೆದು ಅದಕ್ಕೆ ಒಂದು ಚಮಚ ಗುಲಾಬಿ ರಸ ಹಾಗೂ ವಿನೆಗರ್ ಸೇರಿಸಿ ಬಣ್ಣವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ. ನಂತ್ರ ಮುಖವನ್ನು ಸ್ವಚ್ಛ ನೀರಿನಲ್ಲಿ ತೊಳೆಯಿರಿ. 2 ಬಾರಿ ಹೀಗೆ ಮಾಡಿದ್ರೆ ಬಣ್ಣ ತೊಳೆದು ಹೋಗುತ್ತದೆ.
ಮುಲ್ತಾನಿ ಮಿಟ್ಟಿ : ಮುಲ್ತಾನಿ ಮಿಟ್ಟಿಗೆ ನಿಂಬೆ ರಸ ಹಾಗೂ ಗ್ಲಿಸರಿನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತ್ರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ಸ್ವಚ್ಛಗೊಳಿಸಿ.
ಮೂಲಂಗಿ ರಸ : ಮೂಲಂಗಿ ರಸ ಕೂಡ ಬಣ್ಣ ತೆಗೆಯಲು ಸಹಕಾರಿ. ಮೂಲಂಗಿ ರಸಕ್ಕೆ ಹಾಲು ಹಾಗೂ ಕಡಲೆ ಹಿಟ್ಟನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸಮಯದ ನಂತ್ರ ಮುಖವನ್ನು ತೊಳೆಯಿರಿ.
ಸೇಬು-ಕಿತ್ತಳೆ : 2-3 ಕಪ್ ನೀರನ್ನು ತೆಗೆದುಕೊಂಡು ಸೇಬು ಕತ್ತರಿಸಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನೀರು ದಪ್ಪಗಾದ ಮೇಲೆ ಕಿತ್ತಳೆ ರಸವನ್ನು ಇದಕ್ಕೆ ಸೇರಿಸಿ ಮಸಾಜ್ ಮಾಡಿ.