ಕಣ್ಣಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪು ವರ್ತುಲಗಳು ನಿಮ್ಮ ಸೌಂದರ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿ ಬಿಡುತ್ತವೆ. ಕೆಲವೊಮ್ಮೆ ಇದು ವಂಶ ಪಾರಂಪರ್ಯದಿಂದ ಬಂದಿದ್ದರೆ ಇನ್ನು ಕೆಲವೊಮ್ಮೆ ಕೆಲಸದ ಒತ್ತಡ, ಖಿನ್ನತೆ, ನಿದ್ರಾಹೀನತೆಯ ಲಕ್ಷಣವಾಗಿರಬಹುದು.
ಒಮ್ಮೆ ಇದು ವಕ್ಕರಿಸಿಕೊಂಡರೆ ಬಹುದಿನಗಳ ಕಾಲ ನಿಮ್ಮನ್ನು ಬಿಟ್ಟು ದೂರ ಸರಿಯುವುದಿಲ್ಲ. ಇದರ ನಿವಾರಣೆಗೆ ಮನೆಯಲ್ಲೇ ಇರುವ ಹಲವು ವಸ್ತುಗಳು ಸಹಾಯ ಮಾಡುತ್ತವೆ. ಟೊಮೆಟೊ ಹಣ್ಣಿನ ರಸಕ್ಕೆ ನಿಂಬೆ ರಸ ಬೆರೆಸಿ. ಕಣ್ಣು ಮುಚ್ಚಿ ಈ ಮಿಶ್ರಣವನ್ನು ಕಣ್ಣಿನ ಸುತ್ತ ಹಚ್ಚಿ. ಕನಿಷ್ಠ ಒಂದು ಗಂಟೆ ಬಳಿಕ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಿರಿ.
ಕನ್ನಡಕ ಧರಿಸಿ ಉಂಟಾದ ಕಲೆ ಹೋಗಲಾಡಿಸಲು ಪೈನಾಪಲ್ ಜ್ಯೂಸ್ ಗೆ ಚಿಟಿಕೆ ಅರಶಿನ ಪುಡಿ ಬೆರೆಸಿ ಪೇಸ್ಟ್ ತಯಾರಿಸಿ. ಕಣ್ಣು ಮುಚ್ಚಿ, ಸುತ್ತಲೂ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆಯಿರಿ. ವಾರಕ್ಕೆ ನಾಲ್ಕು ಬಾರಿ ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಲೆ ಇಲ್ಲವಾಗುತ್ತದೆ.
ಆಲೂಗಡ್ಡೆ ಸಿಪ್ಪೆ ತೆಗೆದು ತುರಿದಿಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ, ಆಲಿವ್ ಆಯಿಲ್ ಹಾಕಿ. ಕಣ್ಣ ಕೆಳಭಾಗಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನ ಬಿಟ್ಟು ದಿನ ಹೀಗೆ ಮಾಡುವುದರಿಂದ ಕಣ್ಣುಗಳ ಕೆಳಗಿನ ಕಪ್ಪು ಕಲೆ ದೂರವಾಗುತ್ತದೆ.