ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷದ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ 14 ನೇ ದಿನ ಪೂರೈಸಿದೆ.
ರಾಹುಲ್ ಗಾಂಧಿ ಅವರ ರ್ಯಾಲಿ ಕೇರಳದ ಎರ್ನಾಕುಲಂ ಜಿಲ್ಲೆಯನ್ನು ತಲುಪುತ್ತಿದ್ದಂತೆ, ಪಕ್ಷವು ನಿರೀಕ್ಷಿಸಿರದ ಪ್ರಮಾದ ಉಂಟಾಗಿದ್ದು, ಅನಗತ್ಯ ವಿವಾದ ಎದುರಿಸುವಂತಾಗಿದೆ.
ಭಾರತ್ ಜೋಡೋ ಯಾತ್ರೆಯ ಪೋಸ್ಟರ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ವಿ.ಡಿ. ಸಾವರ್ಕರ್ ಫೋಟೋ ಕಂಡು ಬಂದಿದೆ. ಕಾಂಗ್ರೆಸ್ ಸಾವರ್ಕರ್ ಅವರನ್ನು ಎಂದಿಗೂ ಸ್ವಾತಂತ್ರ್ಯ ಹೋರಾಟಗಾರ ಎಂದು ಪರಿಗಣಿಸಿಲ್ಲ, ಅವರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ಕ್ಷಮೆಯಾಚಿಸಿದ್ದರು ಎಂದು ಟೀಕಿಸಿದೆ.
ಎಲ್.ಡಿ.ಎಫ್. ಬೆಂಬಲಿತ ಕೇರಳದ ಪಕ್ಷೇತರ ಶಾಸಕ ಪಿ.ವಿ. ಅನ್ವರ್ ಅವರು, ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಚೆಂಗಮನಾಡಿನಲ್ಲಿ ಇರಿಸಲಾಗಿರುವ ಫ್ಲೆಕ್ಸ್ ಗಳಲ್ಲಿ ಸಾವರ್ಕರ್ ಅವರ ಫೋಟೋ ಇದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ನಂತರ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್ ಫೋಟೋ ಮೇಲೆ ಮಹಾತ್ಮ ಗಾಂಧಿ ಫೋಟೋ ಅಂಟಿಸಿದ್ದಾರೆ.
ಮಹಾತ್ಮಾ ಗಾಂಧಿಯವರ ಚಿತ್ರದೊಂದಿಗೆ ಸಾವರ್ಕರ್ ಅವರ ಚಿತ್ರವನ್ನು ಮುಚ್ಚುವ ಮೂಲಕ ಕಾಂಗ್ರೆಸ್ ತನ್ನ ತಪ್ಪನ್ನು ಸರಿಪಡಿಸಿದೆ ಎಂದು ಶಾಸಕರು ಮತ್ತೆ ಪೋಸ್ಟ್ ಹಾಕಿದ್ದಾರೆ.
ರಾಹುಲ್ ಜೀ, ನೀವು ಇತಿಹಾಸವನ್ನು ಎಷ್ಟೇ ತಿರುಚಲು ಪ್ರಯತ್ನಿಸಿದರೂ ಸತ್ಯ ಹೊರಬರುತ್ತದೆ ಎಂದು ಶೆಹಜಾದ್ ಪೂನವಾಲಾ ಟ್ವೀಟ್ ಮಾಡಿದ್ದಾರೆ.
ವೀರ್ ಸಾವರ್ಕರ್ ಅವರ ಚಿತ್ರಗಳು ಎರ್ನಾಕುಲಂನಲ್ಲಿ(ವಿಮಾನ ನಿಲ್ದಾಣದ ಬಳಿ) ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಅಲಂಕರಿಸಿವೆ. ತಡವಾಗಿಯಾದರೂ ರಾಹುಲ್ ಗಾಂಧಿಯವರಿಗೆ ಅರಿವಾಗಿದೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.