ಪ್ರಪಂಚದಾದ್ಯಂತ ಒಂದಕ್ಕಿಂತ ಹೆಚ್ಚು ಐಶಾರಾಮಿ ಹೋಟೆಲ್‌ಗಳಿವೆ. ಕೆಲವು ಹೋಟೇಲ್‌ಗಳಂತೂ ಇಂದ್ರಲೋಕವನ್ನೇ ಮೀರಿಸೋ ಹಾಗಿರುತ್ತೆ. ಇಲ್ಲೆಲ್ಲ ಹೋಗಿ ಎಂಜಾಯ್ ಮಾಡ್ಬೇಕು ಅಂದ್ರೆ ಜೇಬಲ್ಲಿ ಝಣ, ಝಣ ಕಾಂಚಾಣ ಇರ್ಬೇಕು. ಇಲ್ಲಾ ಅಂದ್ರೆ ಆ ಹೋಟೆಲ್ ಗೇಟ್ ಹತ್ರ ಕೂಡಾ ಯಾರಿಗೂ ಇರೋಲ್ಲ ಎಂಟ್ರಿ. ಸದ್ಯಕ್ಕೆ ಯಾವ ಹೊಟೇಲ್‌ಗೆ ಹೋಗಿ ಇರ್ತಿರೋ, ಇಲ್ವೋ ಅಂತ ತಿಳ್ಕೊಳ್ಳೊದಕ್ಕಿಂತ ಹೆಚ್ಚಾಗಿ, ವಿಶ್ವದ ಅತಿ ದೊಡ್ಡ ಹೊಟೇಲ್ ಒಂದರ ಬಗ್ಗೆ ಈಗ ತಿಳಿದುಕೊಳ್ಳೊಣ.
ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾದಲ್ಲಿ ವಿಶ್ವದ ಅತಿ ದೊಡ್ಡ ಹೋಟೆಲ್ ‘ಅಬ್ರಾಜ್ ಕುಡೈ’ ಅನ್ನೊ ಹೆಸರಿನಲ್ಲಿ ನಿರ್ಮಾಣವಾಗುತ್ತಿದೆ. ಈ ಹೋಟೆಲ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಕೊಠಡಿ ಇದ್ದು, ಇದರ ಜೊತೆಗೆ 70 ರೆಸ್ಟೋರೆಂಟ್‌ಗಳು ಇಲ್ಲಿ ಇರಲಿದೆ.
2017ರಲ್ಲೇ ಈ ಹೋಟೆಲ್ ನಿರ್ಮಾಣ ಪೂರ್ಣಗೊಳ್ಳ ಬೇಕಾಗಿದ್ದರೂ 2022 ಮುಗಿದು 23 ಬರುತ್ತಿದ್ದರೂ ಈ ಹೋಟೆಲ್ ಕಾರ್ಯ ಇನ್ನೂ ಮುಗಿದಿಲ್ಲ. ಈ ಹೋಟೆಲ್ 3.5 ಬಿಲಿಯನ್ ಡಾಲರ್ ಯೋಜನೆಯಾಗಿದ್ದು, ಕಚ್ಚಾ ತೈಲದ ಬೆಲೆಯಲ್ಲಿ ನಿರಂತರ ಕುಸಿತದಿಂದಾಗಿ, ಈ ಹೋಟೆಲ್‌ನ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
ದಾಖಲೆಗಳ ಪ್ರಕಾರ, ರಷ್ಯಾದ ಮಾಸ್ಕೋದಲ್ಲಿರುವ ಹೋಟೆಲ್ ‘ಇಜ್ಮೈಲೊವೊ‘, ವಿಶ್ವದ ಅತಿದೊಡ್ಡ ಹೋಟೆಲ್ ಆಗಿದೆ. ಈ ಹೋಟೆಲ್‌ನಲ್ಲಿ ಒಟ್ಟು 7,500 ಕೊಠಡಿಗಳಿದ್ದು, ಬೇರೆ ಯಾವ ಹೋಟೆಲ್‌ಗಳು ಕೂಡಾ ಇಷ್ಟು ಸಂಖ್ಯೆಯ ಕೋಣೆಗಳನ್ನ ಹೊಂದಿಲ್ಲ. ಇನ್ನೂ ಈ ಹೊಟೇಲ್‌ನ ಇಡೀ ಘಟಕ ನಾಲ್ಕು ಗೋಪುರಗಳಿಂದ ಮಾಡಲ್ಪಟ್ಟಿದ್ದು, ಪ್ರತಿಯೊಂದೂ 30 ಮಹಡಿಗಳನ್ನು ಹೊಂದಿದೆ. ಪ್ರತಿಯೊಂದು ಗೋಪುರಕ್ಕೂ ಗ್ರೀಕ್ ವರ್ಣಮಾಲೆಯ ಹೆಸರನ್ನು ಇಡಲಾಗಿದೆ – ಆಲ್ಫಾ, ಬೀಟಾ, ವೇಗಾ ಮತ್ತು ಗಾಮಾ-ಡೆಲ್ಟಾ.
ಸದ್ಯಕ್ಕೆ ಈ ಹೋಟೆಲ್ಗಿಂತಲೂ ವಿಶಾಲಾಗಿರುವ ’ಅಬ್ರಾಜ್ ಕುಡೈ’ ಹೋಟೆಲ್ ಸೌದಿ ಅರೇಬಿಯಾದ ಪವಿತ್ರ ನಗರವಾದ ಮೆಕ್ಕಾದಲ್ಲಿ ತಲೆಎತ್ತಲಿದೆ. ಇದು ಒಟ್ಟು 10,000 ಕೊಠಡಿಗಳನ್ನು ಹೊಂದಿರುವುದಲ್ಲದೇ, ಕೊಠಡಿಗಳ ಹೊರತಾಗಿ, 12 ಟವರ್‌ಗಳನ್ನು ಹೊಂದಿದ್ದು, ಇದರ ಜೊತೆಗೆ ಈ ಹೋಟೆಲ್ನಲ್ಲಿ 70 ರೆಸ್ಟೋರೆಂಟ್‌ಗಳು ಇರಲಿದೆ.
ಈ 45 ಅಂತಸ್ತಿನ ಎತ್ತರದ ಹೋಟೆಲ್‌ನ ಮೇಲೆ ನಾಲ್ಕು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ, ಇದರಿಂದ ಅತಿಥಿಗಳು ಹೆಲಿಕಾಪ್ಟರ್‌ನಲ್ಲೇ ಇಲ್ಲಿ ಡೈರೆಕ್ಟ್ ಆಗಿ ಎಂಟ್ರಿಯಾಗಬಹುದಾಗಿದೆ. ಇದು ಭುಮಿಯ ಮೇಲಿನ ಸ್ವರ್ಗ ಎಂದು ಹೇಳಲಾಗುತ್ತಿದ್ದರೂ, ಈ ಸ್ವರ್ಗಕ್ಕೆ ಹೋಗ್ಬೇಕು ಅಂದ್ರೆ, ದೇಹದಲ್ಲಿ ಉಸಿರು ಅಲ್ಲ ಜೇಬು ತುಂಬಾ ಹಣ ಇರಬೇಕು.