ನೋಯ್ಡಾ: ಸಮಾಜವಾದಿ ಪಕ್ಷದ ನಾಯಕ ಮತ್ತು ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಬೆದರಿಕೆ ಹಾಕಿದ ಸಮಾಜವಾದಿ ಪಕ್ಷದ ಮುಖಂಡ ಮಹೇಶ್ ಯಾದವ್, ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಈತ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದು.
ಸುಸ್ತಿದಾರರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮಹೇಶ್ ಯಾದವ್ ಗೆ ಸೇರಿದ ಸೆಕ್ಟರ್-18ರಲ್ಲಿರುವ ವಾಣಿಜ್ಯ ಸಂಕೀರ್ಣಕ್ಕೆ ಬುಧವಾರ ಸೀಲ್ ಹಾಕಿದ್ದಾರೆ. ಇದರಿಂದ ಕೋಪಗೊಂಡ ಯಾದವ್, ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ, ನೀವು ಯಾರ ಆದೇಶದ ಮೇರೆಗೆ ಇದನ್ನು ಮಾಡಿದ್ದೀರಿ, ಆದರೆ ನಮ್ಮ ಸಮಯ ಬಂದಾಗ ಯಾರೂ ನಿಮ್ಮನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಮಹೇಶ್ ಯಾದವ್, ಅಖಿಲೇಶ್ ಯಾದವ್ ಅವರ ಆಪ್ತ ಎಂದು ಹೇಳಲಾಗಿದ್ದು, ಜೊತೆಗೆ ಸಮಾಜವಾದಿ ಪಕ್ಷದ ಮುಖಂಡ ಕೂಡಾ ಆಗಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ ಅಖಿಲೇಶ್ ಯಾದವ್ ಅವರಿಗೆ ತಮ್ಮ ಮನೆಯಲ್ಲಿ ಅನೇಕ ಬಾರಿ ಆತಿಥ್ಯ ನೀಡಿದ್ದಾರೆ ಎಂಬ ವರದಿಗಳಿವೆ.
ನೋಯ್ಡಾದಲ್ಲಿ ಪ್ರಾಧಿಕಾರವು ಬಾಕಿಯನ್ನು ಪಾವತಿಸದ ಸುಸ್ತಿದಾರರ ವಿರುದ್ಧದ ಕಠಿಣ ಕ್ರಮದಲ್ಲಿ, ಮಂಜೂರು ಮಾಡಿದ ಪ್ಲಾಟ್ ಅನ್ನು ರದ್ದುಗೊಳಿಸಿದೆ. ನ್ಯಾಯಾಲಯ ವಜಾಗೊಳಿಸಿದ ತೀರ್ಪಿನ ವಿರುದ್ಧ ಯಾದವ್, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಎಂಬ ವರದಿಗಳಿವೆ. 21 ಕೋಟಿಯನ್ನು ಕಂತುಗಳಲ್ಲಿ ಪ್ರಾಧಿಕಾರಕ್ಕೆ ಠೇವಣಿ ಇಡುವಂತೆಯೂ ನ್ಯಾಯಾಲಯ ಆದೇಶ ನೀಡಿದೆ.
ಆದಾಗ್ಯೂ, ಹಂಚಿಕೆದಾರರು, ಮೊತ್ತವನ್ನು ಠೇವಣಿ ಮಾಡಲು ವಿಫಲರಾಗಿದ್ದಾರೆ ಮತ್ತು ಪ್ರಾಧಿಕಾರವು ನೀಡಿದ ಗಡುವುಗಳಲ್ಲಿ ಡೀಫಾಲ್ಟ್ ಮಾಡಿದ್ದಾರೆ. ಜೊತೆಗೆ ಪ್ರಾಧಿಕಾರದ ಅನುಮತಿ ಪಡೆಯದೇ ಕಟ್ಟಡದಲ್ಲಿರುವ ಅಂಗಡಿಗಳನ್ನು ಹಲವು ಶೋರೂಂ ಮಾಲೀಕರಿಗೆ ಬಾಡಿಗೆಗೆ ನೀಡಿದ್ದರು.
ಇನ್ನು ಈ ಕುರಿತಂತೆ ಪ್ರತಿಕ್ರಿಯಿಸಿರುವ ಮಹೇಶ್ ಯಾದವ್, ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದೇನೆ, ಈ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಕಟ್ಟಡವನ್ನು ಸೀಲ್ ಮಾಡುವಾಗ ಪೊಲೀಸ್ ಸಿಬ್ಬಂದಿ ಬಾಡಿಗೆದಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಅವರು, ಪ್ರಾಧಿಕಾರದ ಕ್ರಮದ ನಂತರ ಅವರು ತೊಂದರೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.