ಕಾರವಾರ: ಸಾತೊಡ್ಡಿ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಮೇಲೆ ಜೇನು ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಫಾಲ್ಸ್ ನಲ್ಲಿ ನಡೆದಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಆಟವಾಡಲೆಂದು ಪ್ರವಾಸಿಗರು ಜಲಪಾತಕ್ಕೆ ಇಳಿದಿದ್ದರು. ಈ ವೇಳೆ ಏಕಾಏಕಿ ಜೇನು ದಾಳಿ ನಡೆಸಿದ್ದು, 30 ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೇನುದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರವಾಸಿಗರಿಗೆ ಸಾತೊಡ್ಡಿ ಜಲಪಾತಕ್ಕೆ ನಿರ್ಬಂಧ ಹೇರಿದೆ. ಬಿಸಗೋಡ ಕ್ರಾಸ್ ನಲ್ಲಿ ಬ್ಯಾನರ್ ಅಳವಡಿಸಿ ಪ್ರವಾಸಿಗರಿಗೆ ನಿರ್ಬಂದ ವಿಧಿಸಲಾಗಿದೆ ಎಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಬಂದವರು ನಿರಾಶರಾಗಿ ವಾಪಾಸ್ ತೆರಳುತ್ತಿದ್ದಾರೆ.