ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಋುವ ಶಾಸಕ ಜಿ.ಟಿ. ದೇವೇಗೌಡ, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ಸಾಧ್ಯತೆ ಇದೆ ಎಂದಿದ್ದು, ಈ ಭೇಟಿಯ ಹಿಂದೆ ಜೆಡಿಎಸ್‌ನ 18 ಶಾಸಕರ ಬೆಂಬಲ ಪಡೆಯುವ ಉದ್ದೇಶವಿರಬಹುದು ಎಂದು ಊಹಿಸಿದ್ದಾರೆ.
ರಾಜಕೀಯದಲ್ಲಿ ಯಾವುದೇ ತಿರುವು ಸಂಭವಿಸಬಹುದು ಎಂದು ಹೇಳಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಜಾರಕಿಹೊಳಿ ಅವರು ಬೇರೆ ಯಾವುದೇ ಕಾರಣಕ್ಕಾಗಿ ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ಸಾಧ್ಯತೆ ಕಡಿಮೆ ಎಂದಿದ್ದಾರೆ. “ಜಾರಕಿಹೊಳಿಯವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ ಎಂದರೆ, ಇದಕ್ಕೆ ಮುಖ್ಯಮಂತ್ರಿ ಆಗುವ ಗುರಿಯೇ ಕಾರಣವಿರಬಹುದು,” ಎಂದು ಜಿ.ಟಿ. ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಸತೀಶ್ ಜಾರಕಿಹೊಳಿ ಮತ್ತು ಕುಮಾರಸ್ವಾಮಿ ಭೇಟಿಯ ನೈಜ ಉದ್ದೇಶ ಏನು ಎಂಬುದು ಇನ್ನಷ್ಟು ಕುತೂಹಲ ಮೂಡಿಸಿದೆ.