ಬೆಂಗಳೂರು: ಶಾಸಕರೊಂದಿಗೆ ಮೈಸೂರು ಪ್ರವಾಸ ರದ್ದಾದ ಬಳಿಕ ಸತೀಶ್ ಜಾರಕಿಹೊಳಿ ದುಬೈ ಪ್ರವಾಸಕ್ಕೆ ತೆರಳಿದ್ದಾರೆ.
ಹಲವು ದಿನಗಳಿಂದ ದುಬೈ ಪ್ರವಾಸಕ್ಕೆ ತೆರಳುವ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು. ಈಗ ಶಾಸಕರನ್ನು ಹೊರತುಪಡಿಸಿ ಆಪ್ತರೊಂದಿಗೆ ಅವರು ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಸತೀಶ್ ಶಾಸಕರೊಂದಿಗೆ ಪ್ರವಾಸಕ್ಕೆ ತೆರಳಬೇಕಿತ್ತು. ಕೊನೆ ಕ್ಷಣದಲ್ಲಿ ಅದು ರದ್ದಾಗಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅಲ್ಲದೇ ಬೆಳಗಾವಿ ರಾಜಕಾರಣದ ಬಗ್ಗೆಯೂ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಈಗ ಆಪ್ತರೊಂದಿಗೆ ಸತೀಶ್ ಜಾರಕಿಹೊಳಿ ವಿದೇಶಕ್ಕೆ ತೆರಳಿದ್ದು, ನಿನ್ನೆ ತಡರಾತ್ರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಶಾಸಕರನ್ನು ಬಿಟ್ಟು ಅವರು ಪ್ರವಾಸಕ್ಕೆ ತೆರಳಿದ್ದಾರೆನ್ನಲಾಗಿದ್ದರೂ ಅವರ ನಡೆ ಕುತೂಹಲ ಮೂಡಿಸಿದೆ.